ನವದೆಹಲಿ: ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ದೆಹಲಿಯ ನಿವಾಸದಲ್ಲಿ ನಗದು ಪತ್ತೆಯಾಗಿರುವ ಆರೋಪಕ್ಕೆ ಸಂಬಂಧಿಸಿದಂತೆ ಆಂತರಿಕ ತನಿಖಾ ಸಮಿತಿಯ ವರದಿಯ ಪ್ರತಿಯನ್ನು ಮಾಹಿತಿ ಹಕ್ಕು ಕಾಯ್ದೆಯಡಿ (ಆರ್‌ಟಿಐ) ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಆಂತರಿಕ ತನಿಖಾ ವರದಿಯ ಪ್ರತಿ ಹಾಗೂ ಅಂದಿನ ಸಿಜೆಐ ಸಂಜೀವ್ ಖನ್ನಾ ಅವರು ಮುಂದಿನ ಕ್ರಮಕ್ಕಾಗಿ ಪ್ರಧಾನಿ ಹಾಗೂ ರಾಷ್ಟ್ರಪತಿಗೆ ಬರೆದ ಪತ್ರದ ಪ್ರತಿಯನ್ನು ನೀಡುವಂತೆ ಕೋರಿ ಮಹಾರಾಷ್ಟ್ರದ ವಕೀಲ ಅಮೃತ್‌ಪಾಲ್ ಸಿಂಗ್ ಖಾಲ್ಸಾ ಅವರು ಮೇ 9ರಂದು ಆರ್‌ಟಿಐ ಅಡಿ ಅರ್ಜಿ ಸಲ್ಲಿಸಿದ್ದರು.
ಸುಪ್ರೀಂ ಕೋರ್ಟ್‌ನ ಕೇಂದ್ರೀಯ ಸಾರ್ವಜನಿಕ ಮಾಹಿತಿ ಅಧಿಕಾರಿ (ಸಿಪಿಐಒ) ಹಿಮಾನಿ ಶರದ್ ಅವರು ಮೇ 21ರಂದು ಅರ್ಜಿಯನ್ನು ತಿರಸ್ಕರಿಸಿದ್ದಾರೆ. ಸುಪ್ರೀಂ ಕೋರ್ಟ್ ವರ್ಸಸ್ ಸುಭಾಷ್ ಚಂದ್ರ ಅಗರವಾಲ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಲ್ಲಿ ನಿಗದಿಪಡಿಸಿದ ಮಾನದಂಡಗಳ ಆಧಾರದಲ್ಲಿ ಈ ಮಾಹಿತಿಯನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಖಾಲ್ಸಾ ಕೇಳಿರುವ ಮಾಹಿತಿ ನೀಡುವುದನ್ನು ನಿರಾಕರಿಸಲು ನ್ಯಾಯಾಂಗದ ಸ್ವಾತಂತ್ರ್ಯ, ವಿಶ್ವಾಸಾರ್ಹ ಸಂಬಂಧ, ಖಾಸಗಿತನದ ಹಕ್ಕಿನ ಮೇಲಿನ ದಾಳಿ ಮತ್ತು ಗೋಪ್ಯತೆಯ ಕರ್ತವ್ಯ ಉಲ್ಲಂಘನೆ– ಮುಂತಾದ ಕಾರಣಗಳನ್ನು ನೀಡಿದ್ದಾರೆ.
ಯಶವಂತ್ ವರ್ಮಾ ಅವರ ನವದೆಹಲಿಯ ಅಧಿಕೃತ ನಿವಾಸದಲ್ಲಿ ಅಪಾರ ಪ್ರಮಾಣದ ಹಣ ಪತ್ತೆಯಾಗಿದೆ ಎನ್ನಲಾದ ಪ್ರಕರಣವು ನ್ಯಾಯಾಂಗ ವಲಯದಲ್ಲಿ ಕೋಲಾಹಲ ಉಂಟುಮಾಡಿತ್ತು. ವರ್ಮಾ ಅವರ ಮನೆಗೆ ಬಿದ್ದ ಬೆಂಕಿಯನ್ನು ನಂದಿಸಲು ತೆರಳಿದ್ದ ಅಗ್ನಿ ಶಾಮಕ ದಳದ ಸಿಬ್ಬಂದಿ ಭಾರಿ ಪ್ರಮಾಣದ ನಗದು ಪತ್ತೆ ಮಾಡಿದ್ದಾರೆ ಎಂದು ವರದಿಯಾಗಿತ್ತು.
ವರ್ಮಾ ಅವರನ್ನು ದೆಹಲಿ ಹೈಕೋರ್ಟ್‌ನಿಂದ ಅಲಹಾಬಾದ್ ಹೈಕೋರ್ಟ್‌ಗೆ ವರ್ಗಾವಣೆ ಮಾಡಲಾಗಿದೆಯಾದರೂ, ಅವರಿಗೆ ನ್ಯಾಯಾಂಗದ ಯಾವುದೇ ಕೆಲಸವನ್ನು ನೀಡಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.