ಸುಪ್ರೀಂ ಕೋರ್ಟ್
ನವದೆಹಲಿ: ಗುಜರಾತ್‌ನಲ್ಲಿರುವ ಸಾಬರಮತಿ ಆಶ್ರಮದ ಮರು ಅಭಿವೃದ್ಧಿ ಯೋಜನೆ ವಿರೋಧಿಸಿ ಮಹಾತ್ಮ ಗಾಂಧೀಜಿ ಅವರ ಮರಿ ಮೊಮ್ಮಗ ತುಷಾರ್ ಗಾಂಧಿ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ತಿರಸ್ಕರಿಸಿದೆ.
ಈ ಕುರಿತು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಎಂ.ಎಂ. ಸುಂದ್ರೇಶ್ ಮತ್ತು ರಾಜೇಶ್ ಬಿಂದಲ, ‘ಎರಡು ವರ್ಷಕ್ಕೂ ಅಧಿಕ ಅವಧಿಯ ಬಳಿಕ ಅರ್ಜಿ ಸಲ್ಲಿಸಲಾಗಿದೆ ಎಂಬುದನ್ನು ಉಲ್ಲೇಖಿಸಿ, ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡಲಾಗದು’ ಎಂದರು.
‘ಉದ್ದೇಶಿತ ಮರು ಅಭಿವೃದ್ಧಿ ಯೋಜನೆಯಡಿ ಸಾಬರಮತಿಗೆ ಹೊಂದಿಕೊಂಡ 40ಕ್ಕೂ ಹೆಚ್ಚು ಕಟ್ಟಡಗಳನ್ನು ರಕ್ಷಿಸಲು ಗುರುತಿಸಲಾಗಿದೆ. ಆದರೆ, ಸುಮಾರು 200 ಕಟ್ಟಡಗಳನ್ನು ಕೆಡವಿ ಹಾಕಲಾಗುತ್ತದೆ ಅಥವಾ ಮತ್ತೆ ನಿರ್ಮಿಸಲಾಗುತ್ತದೆ. ಇದರಿಂದ ಆಶ್ರಮದ ಮೂಲ ಸ್ವರೂಪಕ್ಕೆ ಧಕ್ಕೆಯಾಗಲಿದೆ’ ಎಂದು ತುಷಾರ್ ಗಾಂಧಿ ಅವರು ತಮ್ಮ ಅರ್ಜಿಯಲ್ಲಿ ತಿಳಿಸಿದ್ದರು.
2021ರ ಮಾರ್ಚ್ 5ರಂದು ಆಶ್ರಮದ ಮರು ಅಭಿವೃದ್ಧಿಗೆ ಮುಂದಾದ ಸರ್ಕಾರದ ನಿರ್ಣಯದ ವಿರುದ್ಧ ತುಷಾರ್ ಮೊದಲಿಗೆ ಗುಜರಾತ್ ಹೈಕೋರ್ಟ್ ಮೊರೆ ಹೋಗಿದ್ದರು.
ಗಾಂಧಿ ಆಶ್ರಮವೆಂದೇ ಗುರುತಿಸಲಾದ ಸಾಬರಮತಿ ಆಶ್ರಮವನ್ನು 1917ರಲ್ಲಿ ಅಹಮದಾಬಾದ್‌ನಲ್ಲಿ ಮಹಾತ್ಮ ಗಾಂಧೀಜಿ ಸ್ಥಾಪನೆ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.