ನವದೆಹಲಿ: ‘ಮೈತೇಯಿ ಮತ್ತು ಕುಕಿ ಬುಡಕಟ್ಟು ಸಮುದಾಯದ ನಡುವಣ ಹಿಂಸಾಚಾರದಿಂದ ನಲುಗಿರುವ ಮಣಿಪುರದಲ್ಲಿ ಮತ್ತಷ್ಟು ಹಿಂಸೆ ಉಲ್ಬಣಗೊಳಿಸಲು ನಮ್ಮನ್ನು ವೇದಿಕೆಯಾಗಿ ಬಳಸಿಕೊಳ್ಳಬೇಡಿ. ರಚನಾತ್ಮಕ ಸಲಹೆಗಳನ್ನಷ್ಟೇ ನ್ಯಾಯಾಲಯದ ಮುಂದೆ ಮಂಡಿಸಬೇಕು’ ಎಂದು ಸುಪ್ರೀಂ ಕೋರ್ಟ್ ಸೋಮವಾರ ತಾಕೀತು ಮಾಡಿದೆ.
ಕಣಿವೆ ರಾಜ್ಯದ ಪರಿಸ್ಥಿತಿಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಪಿ.ಎಸ್. ನರಸಿಂಹ ಅವರಿದ್ದ ವಿಭಾಗೀಯ ಪೀಠವು, ನ್ಯಾಯಾಲಯದ ಸಮಯವನ್ನು ವ್ಯರ್ಥಗೊಳಿಸಲು ಯತ್ನಿಸಿದ ಅರ್ಜಿದಾರರಿಗೆ ತಪರಾಕಿ ನೀಡಿತು.
ಮಣಿಪುರ ಬುಡಕಟ್ಟು ವೇದಿಕೆ, ಮಣಿಪುರ ಹೈಕೋರ್ಟ್ ಬಾರ್ ಅಸೋಸಿಯೇಷನ್ ಸೇರಿದಂತೆ ವಿವಿಧ ಸಂಘಟನೆಗಳು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಪೀಠವು, ಸಂಘರ್ಷ ನಿಯಂತ್ರಣಕ್ಕೆ ಪೂರಕವಾಗಿರುವ ಸಲಹೆಗಳನ್ನು ನೀಡುವಂತೆ ಹಾಜರಿದ್ದ ವಕೀಲರಿಗೆ ಸೂಚಿಸಿತು. ಬಳಿಕ ಮಂಗಳವಾರಕ್ಕೆ ವಿಚಾರಣೆಯನ್ನು ಮುಂದೂಡಿತು.
ಜನರ ರಕ್ಷಣೆ ಸರ್ಕಾರದ ಹೊಣೆ: ಹಿಂಸಾಚಾರ ನಿಯಂತ್ರಣಕ್ಕೆ ಸುಪ್ರೀಂ ಕೋರ್ಟ್ ಕಾನೂನು ಮತ್ತು ಸುವ್ಯವಸ್ಥೆಯನ್ನು ಕೈಗೆತ್ತಿಕೊಳ್ಳುವುದಿಲ್ಲ. ಅದು ಕೇಂದ್ರ ಮತ್ತು ಮಣಿಪುರ ಸರ್ಕಾರದ ಹೊಣೆಗಾರಿಕೆಯಾಗಿದೆ ಎಂದು ಪೀಠವು ಒತ್ತಿ ಹೇಳಿತು.
‘ಸಂಘರ್ಷ ತಡೆ ಮತ್ತು ಅಲ್ಲಿನ ಸಮಸ್ಯೆಗಳಿಗೆ ಸಂಬಂಧಿಸಿದಂತೆ ನಮ್ಮನ್ನು ಬಳಸಿಕೊಳ್ಳಬೇಡಿ. ನಾವು ಕಾನೂನನ್ನು ಕೈಗೆತ್ತಿಕೊಳ್ಳುವುದಿಲ್ಲ. ಸಂಘರ್ಷವು ಮಾನವೀಯ ನೆಲೆಗಟ್ಟಿನಲ್ಲಿ ಬಗೆಹರಿಸಬಹುದಾದ ವಿಷಯವಾಗಿದೆ. ಇದರ ಜವಾಬ್ದಾರಿಯನ್ನು ಸರ್ಕಾರಗಳೇ ಹೊರಬೇಕಿದೆ’ ಎಂದು ಪ್ರತಿಪಾದಿಸಿತು.
‘ರಾಜ್ಯದಲ್ಲಿ ಎಲ್ಲರೂ ಕುಕಿ ಬುಡಕಟ್ಟು ಜನರ ವಿರುದ್ಧವಾಗಿದ್ದಾರೆ’ ಎಂಬ ಮಣಿಪುರ ಬುಡಕಟ್ಟು ವೇದಿಕೆ ಪರ ಹಾಜರಿದ್ದ ಹಿರಿಯ ವಕೀಲ ಕಾಲಿನ್ ಗೊನ್ಸಾಲ್ವಿಸ್ ಅವರ ವಾದಕ್ಕೆ ಅರ್ಧದಲ್ಲೇ ತಡೆ ಹಾಕಿದ ಪೀಠವು, ‘ನಿಮ್ಮ ಈ ಶಂಕಾಸ್ಪದ ಮಾಹಿತಿಯಿಂದ ನಾವು ಕಾನೂನು ಕೈಗೆತ್ತಿಕೊಳ್ಳಲು ಆಗುವುದಿಲ್ಲ’ ಎಂದು ಚಾಟಿ ಬೀಸಿತು.
ಮಣಿಪುರ ಸರ್ಕಾರದ ಪರ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ‘ಕೇಂದ್ರ ಮತ್ತು ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮಗಳಿಂದ ಸಂಘರ್ಷ ನಿಯಂತ್ರಣಕ್ಕೆ ಬರುತ್ತಿದೆ’ ಎಂದು ತಿಳಿಸಿದರು.
ಸಂಘರ್ಷ ಪೀಡಿತ ನೆಲಕ್ಕೆ ರಾಷ್ಟ್ರೀಯ ಹೆದ್ದಾರಿ ಮೂಲಕವೇ ಅಗತ್ಯ ವಸ್ತುಗಳ ಪೂರೈಕೆಯಾಗಬೇಕಿದೆ. ಹಾಗಾಗಿ, ಹೆದ್ದಾರಿಯಲ್ಲಿ ಯಾವುದೇ ಅಡೆತಡೆ, ಪ್ರತಿಭಟನೆಗಳು ನಡೆಯದಂತೆ ಕಡಿವಾಣ ಹಾಕಬೇಕಿದೆ ಎಂದು ಬಾರ್ ಅಸೋಸಿಯೇಷನ್ ನೀಡಿದ ಸಲಹೆಯನ್ನು ಪೀಠವು ಪುರಸ್ಕರಿಸಿತು.
ಜನರ ರಕ್ಷಣೆಗೆ ಕ್ರಮ: ಬುಡಕಟ್ಟು ಜನರು ಸೇರಿದಂತೆ ಎಲ್ಲಾ ಜಾತಿ, ಧರ್ಮದವರ ಹಕ್ಕುಗಳ ರಕ್ಷಣೆ ಮತ್ತು ಭದ್ರತೆಗೆ ಸರ್ಕಾರ ಅಗತ್ಯ ಕ್ರಮಕೈಗೊಂಡಿದೆ ಎಂದು ಮಣಿಪುರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ವರದಿ ಸಲ್ಲಿಸಿದೆ.
ಒಟ್ಟು 5,995 ಎಫ್‌ಐಆರ್ ದಾಖಲಾಗಿವೆ. ಆರು ಪ್ರಮುಖ ಪ್ರಕರಣಗಳ ತನಿಖೆಯ ಹೊಣೆಯನ್ನು ಸಿಬಿಐಗೆ ವರ್ಗಾಯಿಸಲಾಗಿದೆ ಎಂದು ರಾಜ್ಯ ಮುಖ್ಯ ಕಾರ್ಯದರ್ಶಿ ಸಲ್ಲಿಸಿರುವ ವರದಿಯಲ್ಲಿ ಹೇಳಲಾಗಿದೆ.
ಗುಂಡಿನ ದಾಳಿ: ಯುವಕ ಸಾವು
ಗುವಾಹಟಿ: ಮಣಿಪುರದ ಇಂಫಾಲ್ ಪೂರ್ವ ಮತ್ತು ಕಾಂಗ್ಪೋಕ್ಪಿ ಜಿಲ್ಲೆಯ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಹಳ್ಳಿಯಲ್ಲಿ ಸೋಮವಾರ ಅಪರಿಚಿತ ದುಷ್ಕರ್ಮಿಗಳು ನಡೆಸಿದ ಗುಂಡಿನ ದಾಳಿಗೆ ಯುವಕ ಮೃತಪಟ್ಟಿದ್ದು, ಹತ್ತು ಮಂದಿ ಗಾಯಗೊಂಡಿದ್ದಾರೆ.
ಸೈಖೋಮ್ ಸುಬಾನ್ ಸಿಂಗ್(26) ಎಂಬುವರು ಮೃತಪಟ್ಟಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಭದ್ರತಾ ಪಡೆ ಮೂಲಗಳು ತಿಳಿಸಿವೆ.
ಅಸ್ಸಾಂ ರೈಫಲ್ ಪಡೆಯು ಹೆಚ್ಚಿನ ಅನಾಹುತ ಸಂಭವಿಸದಂತೆ ಮುಂಜಾಗ್ರತಾ ಕ್ರಮಕೈಗೊಂಡಿದೆ. ಇಂಫಾಲ್ ಪೂರ್ವ, ಕಾಂಗ್ಪೋಕ್ಪಿ ಹಾಗೂ ಚುರಚಂದಪುರ ಜಿಲ್ಲೆಯಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ ಎಂದು ತಿಳಿಸಿವೆ.
ಹಲವು ಹಳ್ಳಿಗಳಲ್ಲಿ ಮೈತೇಯಿ ಮತ್ತು ಕುಕಿ ಸಮುದಾಯದವರು ಗುಂಡಿನ ದಾಳಿಯಿಂದ ರಕ್ಷಿಸಿಕೊಳ್ಳಲು ಅಕ್ರಮವಾಗಿ ನಿರ್ಮಿಸಿಕೊಂಡಿದ್ದ ಬಂಕರ್‌ಗಳನ್ನು ಯೋಧರು ತೆರವುಗೊಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.