ADVERTISEMENT

ಕೌಟುಂಬಿಕ ದೌರ್ಜನ್ಯ ಪ್ರಕರಣಗಳ ವರದಿ ಸಲ್ಲಿಕೆಗೆ ‘ಸುಪ್ರೀಂ’ ಸೂಚನೆ

ವಿವರವಾದ ಮಾಹಿತಿ ಸಲ್ಲಿಸುವಂತೆ ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರಕ್ಕೆ ನಿರ್ದೇಶನ

ಪಿಟಿಐ
Published 1 ಮೇ 2022, 13:45 IST
Last Updated 1 ಮೇ 2022, 13:45 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ಮಹಿಳೆಯರನ್ನು ಹಿಂಸಾಚಾರದಿಂದ ರಕ್ಷಿಸುವ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ–2005ರ ಅಡಿಯಲ್ಲಿ ಇಲ್ಲಿಯವರೆಗೆ ದಾಖಲಾದ ಹಾಗೂ ಪರಿಹಾರ ಕಂಡ ಪ್ರಕರಣಗಳ ಸಂಖ್ಯೆಗಳ ಬಗ್ಗೆ ವಿವರ ನೀಡುವಂತೆ ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರಕ್ಕೆ (ನಾಲ್ಸಾ) ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.

ನ್ಯಾಯಮೂರ್ತಿಗಳಾದ ಯು.ಯು. ಲಲಿತ್, ಎಸ್. ರವೀಂದ್ರ ಭಟ್ ಮತ್ತು ಪಿ.ಎಸ್. ನರಸಿಂಹ ಅವರನ್ನೊಳಗೊಂಡ ನ್ಯಾಯಪೀಠವು, ಕಾಯ್ದೆಯಡಿ ದಾಖಲಾದ ಪ್ರಕರಣಗಳ ಮಾಹಿತಿ ಮತ್ತು ವಿವರಗಳನ್ನು ಪಡೆಯಲು ರಾಜ್ಯ ಕಾನೂನು ಸೇವಾ ಪ್ರಾಧಿಕಾರಗಳ ಅಧಿಕಾರಿಗಳಿಗೆ ಸೂಕ್ತ ಪ್ರಶ್ನಾವಳಿಗಳನ್ನು ಕಳುಹಿಸಬಹುದು ಎಂದು ಹೇಳಿದೆ.

ಕೌಟುಂಬಿಕ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಪರಿಣಾಮಕಾರಿ ಕಾನೂನು ನೆರವು, ವಸತಿ ಸೌಲಭ್ಯ ಸೇರಿದಂತೆ ಮೂಲಸೌಕರ್ಯಗಳನ್ನು ಕಲ್ಪಿಸುವ ಕುರಿತು ‘ವಿ ದಿ ವುಮೆನ್ ಆಫ್ ಇಂಡಿಯಾ’ ಸಂಘಟನೆಯು ಸಲ್ಲಿಸಿದ ಮನವಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿದೆ.

‘ಗಂಡ ಅಥವಾ ಅತ್ತೆಯ ವಿರುದ್ಧ ದೂರು ಸಲ್ಲಿಸಿದ ಪ್ರಕರಣಗಳಲ್ಲಿ ದೂರುದಾರರಾದ ವಿವಾಹಿತ ಮಹಿಳೆಯರಿಗೆ ಸೂಕ್ತ ಕಾನೂನು ನೆರವು ಮತ್ತು ಆಶ್ರಯ ಕಲ್ಪಿಸುವ ಅಗತ್ಯವಿದೆ. 15 ವರ್ಷಗಳ ಹಿಂದೆಯೇ ಈ ಕಾನೂನು ಜಾರಿಗೆ ಬಂದಿದ್ದರೂ ಭಾರತದಲ್ಲಿ ಕೌಟುಂಬಿಕ ದೌರ್ಜನ್ಯವು ಮಹಿಳೆಯರ ವಿರುದ್ಧದ ಸಾಮಾನ್ಯ ಅಪರಾಧ ಎಂಬಂತಾಗಿದೆ’ ಎಂದೂ ಸಂಘಟನೆಯು ಮನವಿಯಲ್ಲಿ ಹೇಳಿದೆ.

ಕೇಂದ್ರ ಸರ್ಕಾರದ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ ಅವರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯವು ‘ಪ್ರಾಜೆಕ್ಟ್ ಶಕ್ತಿ’ ಸೇರಿದಂತೆ ಇತರ ಯೋಜನೆಗಳ ಕುರಿತು ಚಿಂತನೆ ನಡೆಸುತ್ತಿದೆ. ‘ಮಿಷನ್ ಶಕ್ತಿ’ ಯೋಜನೆಯು ಈಗಾಗಲೇ ಸಂಪುಟದ ಅನುಮೋದನೆಯನ್ನು ಪಡೆದಿದೆ ಎಂದು ನ್ಯಾಯಪೀಠಕ್ಕೆ ಮಾಹಿತಿ ನೀಡಿದರು.

ನ್ಯಾಯಾಲಯವು ಜುಲೈ 20ಕ್ಕೆ ವಿಚಾರಣೆಯನ್ನು ಮುಂದೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.