ನವದೆಹಲಿ: ಕಾಂಗ್ರೆಸ್‌ಗೆ ಪಕ್ಷಾಂತರ ಮಾಡಿರುವ ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ ಅರ್ಜಿಗಳಿಗೆ ಸಂಬಂಧಿಸಿ ವಿಧಾನಸಭೆ ಸ್ಪೀಕರ್ ನಿರ್ಧಾರ ಕೈಗೊಳ್ಳುವಲ್ಲಿ ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿ ಸಲ್ಲಿಸಲಾಗಿರುವ ಮೇಲ್ಮನವಿಗಳ ಕುರಿತು ಪ್ರತಿಕ್ರಿಯೆ ಸಲ್ಲಿಸುವಂತೆ ತೆಲಂಗಾಣ ಸರ್ಕಾರ ಹಾಗೂ ಸ್ಪೀಕರ್ ಕಚೇರಿಗೆ ಸುಪ್ರೀಂ ಕೋರ್ಟ್ ಮಂಗಳವಾರ ನೋಟಿಸ್ ಜಾರಿ ಮಾಡಿದೆ.
ನ್ಯಾಯಮೂರ್ತಿಗಳಾದ ಬಿ.ಅರ್.ಗವಾಯಿ ಹಾಗೂ ಆಗಸ್ಟಿನ್ ಜಾರ್ಜ್ ಅವರಿದ್ದ ಪೀಠವು ಈ ಕುರಿತ ಮೇಲ್ಮನವಿಗಳ ವಿಚಾರಣೆ ನಡೆಸಿತು.
ವಿಧಾನಸಭೆ ಕಾರ್ಯದರ್ಶಿ, ಚುನಾವಣಾ ಆಯೋಗ ಹಾಗೂ ಪಕ್ಷಾಂತರ ಮಾಡಿರುವ ಶಾಸಕರಿಗೂ ಪ್ರತಿಕ್ರಿಯೆ ಸಲ್ಲಿಸುವಂತೆ ಪೀಠ, ನೋಟಿಸ್ ಜಾರಿ ಮಾಡಿದೆ.
ವಿಚಾರಣೆ ವೇಳೆ, ‘ಪ್ರಜಾತಾಂತ್ರಿಕ ತತ್ವಗಳು ಎಲ್ಲಿ ಹೋದವು? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ, ವಿಧಾನಸಭೆಯ ಅವಧಿ ಕೊನೆಗೊಳ್ಳುವವರೆಗೆ ಇಂತಹ ಸನ್ನಿವೇಶ ಮುಂದುವರಿಯಬೇಕೆ’ ಎಂದು ಪೀಠ ಪ್ರಶ್ನಿಸಿದೆ.
‘ಈ ವಿಚಾರ ಕುರಿತು ವಿಧಾನಸಭೆ ಸ್ಪೀಕರ್ ಅವರಿಗೆ ಎಷ್ಟು ಕಾಲಾವಕಾಶ ನೀಡಬೇಕು ಎಂಬ ಬಗ್ಗೆ ತಿಳಿಸಿ. ಅಲ್ಲಿಯ ವರೆಗೆ ನ್ಯಾಯಾಲಯ ನಿರ್ಣಯ ಪ್ರಕಟಿಸುವುದಿಲ್ಲ’ ಎಂದು ಪ್ರತಿವಾದಿಯೊಬ್ಬರ ಪರ ಹಾಜರಿದ್ದ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ ಅವರನ್ನು ಪೀಠ ಪ್ರಶ್ನಿಸಿತು.
‘ಪ್ರತಿಯೊಂದು ಪ್ರಕರಣವು, ಆಪರೇಷನ್ ಯಶಸ್ವಿ ಆದರೆ, ರೋಗಿ ಬದುಕುಳಿಯಲಿಲ್ಲ ಎಂಬಂತಾಗಬಾರದು’ ಎಂದೂ ಪೀಠ ಹೇಳಿತು.
ಇತರ ಪ್ರತಿವಾದಿಗಳ ಪರ ಹಾಜರಿದ್ದ ವಕೀಲರಾದ ಮುಕುಲ್ ರೋಹಟ್ಗಿ, ಅರ್ಜಿದಾರರ ಪರ ವಕೀಲ ಸಿ.ಎ.ಸುಂದರಮ್ ಅವರ ವಾದಗಳನ್ನು ಆಲಿಸಿದ ನ್ಯಾಯಾಲಯ, ವಿಚಾರಣೆಯನ್ನು ಮಾರ್ಚ್ 25ಕ್ಕೆ ಮುಂದೂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.