ADVERTISEMENT

ಎಸ್‌ಎಂಎಯಿಂದ ಬಳಲುತ್ತಿರುವವರ ಗೇಲಿ: ಸಮಯ್ ರೈನಾ ಸೇರಿ ಐವರಿಗೆ SC ನೋಟಿಸ್‌

ಪಿಟಿಐ
Published 5 ಮೇ 2025, 14:07 IST
Last Updated 5 ಮೇ 2025, 14:07 IST
<div class="paragraphs"><p>ಸಮಯ್ ರೈನಾ</p></div>

ಸಮಯ್ ರೈನಾ

   

–ಇನ್‌ಸ್ಟಾಗ್ರಾಮ್ ಚಿತ್ರ

ನವದೆಹಲಿ: ‘ಇಂಡಿಯಾಸ್ ಗಾಟ್ ಲೇಟೆಂಟ್‌’ ಕಾರ್ಯಕ್ರಮ ನಡೆಸುವ ಸಮಯ್ ರೈನಾ ಸೇರಿದಂತೆ ಸಾಮಾಜಿಕ ಜಾಲತಾಣಗಳ ಮೂಲಕ ಸಾರ್ವಜನಿಕರ ಮೇಲೆ ಪ್ರಭಾವ ಬೀರುವ ಐದು ಮಂದಿಗೆ ವಿಚಾರಣೆಗೆ ಹಾಜರಾಗುವಂತೆ ಸುಪ್ರೀಂ ಕೋರ್ಟ್‌ ಸೋಮವಾರ ಸೂಚಿಸಿದೆ.

ADVERTISEMENT

ವಿರಳ ಕಾಯಿಲೆಯಾದ ‘ಎಸ್‌ಎಂಎ’ಯಿಂದ (ಸ್ಪೈನಲ್ ಮಸ್ಕ್ಯುಲರ್ ಎಟ್ರೋಫಿ) ಬಳಲುತ್ತಿರುವವರನ್ನು ಈ ಐದು ಮಂದಿ ತಮ್ಮ ಕಾರ್ಯಕ್ರಮದಲ್ಲಿ ಗೇಲಿ ಮಾಡಿದ್ದಾರೆ ಎಂದು ಸರ್ಕಾರೇತರ ಸಂಘಟನೆ (ಎನ್‌ಜಿಒ) ‘ಕ್ಯೂರ್‌ ಎಸ್‌ಎಂಎ ಫೌಂಡೇಷನ್ ಆಫ್ ಇಂಡಿಯಾ’ ದೂರಿದೆ.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಎನ್. ಕೋಟೀಶ್ವರ ಸಿಂಗ್ ಅವರು ಇರುವ ವಿಭಾಗೀಯ ಪೀಠವು, ಐದು ಮಂದಿಗೆ ನೋಟಿಸ್‌ ತಲುಪಿಸಬೇಕು ಎಂದು ಮುಂಬೈ ಪೊಲೀಸ್ ಆಯುಕ್ತರಿಗೆ ಸೂಚಿಸಿದೆ. ಈ ಐವರು ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗದೆ ಇದ್ದರೆ ಕಠಿಣ ಕ್ರಮ ಜರುಗಿಸಬೇಕಾಗುತ್ತದೆ ಎಂದು ಪೀಠವು ಎಚ್ಚರಿಕೆ ನೀಡಿದೆ.

ಅಂಗವಿಕಲರು ಮತ್ತು ವಿರಳ ಕಾಯಿಲೆಗೆ ತುತ್ತಾದವರ ವಿಚಾರದಲ್ಲಿ ಸಾಮಾಜಿಕ ಜಾಲತಾಣಗಳ ವಸ್ತು–ವಿಷಯದ ಮೇಲೆ ನಿಯಂತ್ರಣ ವಿಧಿಸುವ ಸಂಬಂಧ ನಿರ್ದೇಶನ ನೀಡಬೇಕು ಎಂದು ಎನ್‌ಜಿಒ ಸಲ್ಲಿಸಿರುವ ಅರ್ಜಿಯಲ್ಲಿ ಮನವಿ ಮಾಡಲಾಗಿದೆ. ಈ ದಿಸೆಯಲ್ಲಿ ನೆರವು ಒದಗಿಸಬೇಕು ಎಂದು ಪೀಠವು ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಅವರನ್ನು ಕೋರಿದೆ.

ಸಾಮಾಜಿಕ ಜಾಲತಾಣಗಳ ಮೂಲಕ ಪ್ರಭಾವ ಬೀರುವ ಶಕ್ತಿ ಹೊಂದಿರುವವರು ಇಂತಹ ವ್ಯಕ್ತಿಗಳನ್ನು ಗೇಲಿ ಮಾಡುವುದು ನೈತಿಕ ಸ್ಥೈರ್ಯವನ್ನು ಕುಗ್ಗಿಸುವಂತಹ ಕೆಲಸ ಎಂದು ಪೀಠವು ಹೇಳಿದೆ. ಇಂತಹ ಪ್ರಕರಣ ಮುಂದೆ ಆಗದಂತೆ ಮಾಡಲು ಶಿಕ್ಷೆಯ ಅಗತ್ಯ ಇದೆ ಎಂದು ಅದು ಹೇಳಿದೆ.

ಅಂಗವಿಕಲರು ಹಾಗೂ ವಿರಳ ಕಾಯಿಲೆಗಳಿಗೆ ತುತ್ತಾದವರ ವಿಚಾರದಲ್ಲಿ ಸಾಮಾಜಿಕ ಜಾಲತಾಣಗಳ ಕಾರ್ಯಕ್ರಮಗಳು, ಬರಹಗಳು ಹೇಗಿರಬೇಕು ಎಂಬುದಕ್ಕೆ ಸಂಬಂಧಿಸಿದಂತೆ ಮಾರ್ಗಸೂಚಿಯನ್ನು ರೂಪಿಸುವ ಇರಾದೆಯನ್ನು ಪೀಠವು ವ್ಯಕ್ತಪಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.