ADVERTISEMENT

ಹೈಕೋರ್ಟ್‌ ಆದೇಶಕ್ಕೆ ತಡೆ ನೀಡಲು ‘ಸುಪ್ರೀಂ’ ನಿರಾಕರಣೆ

ಆಂಧ್ರ ಎಸ್ಇ‌ಸಿಗೆ ನೋಟಿಸ್‌ ಜಾರಿಗೊಳಿಸಿದ ಸುಪ್ರೀಂಕೋರ್ಟ್‌

ಪಿಟಿಐ
Published 10 ಜೂನ್ 2020, 9:22 IST
Last Updated 10 ಜೂನ್ 2020, 9:22 IST
ಸುಪ್ರೀಂಕೋರ್ಟ್‌
ಸುಪ್ರೀಂಕೋರ್ಟ್‌    

ನವದೆಹಲಿ: ರಾಜ್ಯ ಚುನಾವಣಾ ಆಯುಕ್ತರ ಅಧಿಕಾರಾವಧಿಯನ್ನು ಮೊಟಕುಗೊಳಿಸಿ ಆಂಧ್ರ ಪ್ರದೇಶ ಸರ್ಕಾರ ಹೊರಡಿಸಿದ್ದ ಸುಗ್ರೀವಾಜ್ಞೆ ವಜಾಗೊಳಿಸಿದ್ದ ಹೈಕೋರ್ಟ್‌ ಆದೇಶಕ್ಕೆ ತಡೆಯಾಜ್ಞೆ ನೀಡಲುಸುಪ್ರೀಂಕೋರ್ಟ್‌ ನಿರಾಕರಿಸಿದೆ.

ಹೈಕೋರ್ಟ್‌ ಆದೇಶ ಪ್ರಶ್ನಿಸಿ ಆಂಧ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು.ಈ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯ ಚುನಾವಣಾ ಆಯೋಗ (ಎಸ್‌ಇಸಿ) ಮತ್ತು ಇತರರಿಗೆ ವಿವರಣೆ ನೀಡುವಂತೆ ಸುಪ್ರೀಂಕೋರ್ಟ್‌ ಬುಧವಾರ ನೋಟಿಸ್‌ ಜಾರಿಗೊಳಿಸಿದೆ.

ಮುಖ್ಯ ನ್ಯಾಯಮೂರ್ತಿ ಎಸ್‌.ಎ. ಬೊಬಡೆ, ನ್ಯಾಯಮೂರ್ತಿಗಳಾದ ಎ.ಎಸ್. ಬೋಪಣ್ಣ ಮತ್ತು ಹೃಷಿಕೇಶ ರಾಯ್ ಅವರನ್ನೊಳಗೊಂಡ ನ್ಯಾಯಪೀಠವು ಹೈಕೋರ್ಟ್‌ ಆದೇಶಕ್ಕೆ ತಡೆಯಾಜ್ಞೆ ನೀಡಲು ನಿರಾಕರಿಸಿತು. ಇದೇ ವೇಳೆ ಅದು ಮುಖ್ಯ ಚುನಾವಣಾ ಆಯೋಗ ಮತ್ತು ಆಯುಕ್ತ ಹುದ್ದೆಗೆ ಮರಳಿದ್ದ ನಿಮ್ಮಾಗದ್ದ ರಮೇಶ ಕುಮಾರ್ ಅವರಿಗೆ ವಿವರಣೆ ಕೋರಿ ನೋಟಿಸ್‌ ಜಾರಿಗೊಳಿಸಿತು.

ADVERTISEMENT

ರಾಜ್ಯ ಚುನಾವಣಾ ಆಯುಕ್ತರ ಅಧಿಕಾರವಧಿಯನ್ನು ಐದು ವರ್ಷಗಳಿಂದ ಮೂರು ವರ್ಷಗಳಿಗೆ ಮೊಟಕುಗೊಳಿಸಿ ವೈ.ಎಸ್‌.ಜಗನ್‌ ಮೋಹನ್‌ ರೆಡ್ಡಿ ಸರ್ಕಾರ ಏಪ್ರಿಲ್‌ 10ರಂದು ಸುಗ್ರೀವಾಜ್ಞೆ ಹೊರಡಿಸಿತ್ತು. ಈ ಸುಗ್ರೀವಾಜ್ಞೆಯನ್ನು ಮೇ 29ರಂದು ಆಂಧ್ರ ಪ್ರದೇಶದ ಹೈಕೋರ್ಟ್‌ ವಜಾಗೊಳಿಸಿತ್ತು.

ಅಲ್ಲದೆ ಮದ್ರಾಸ್‌ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ವಿ. ಕನಕರಾಜ್‌ ಅವರನ್ನು ಎಸ್‌ಇಸಿ ಆಗಿ ನೇಮಿಸಿದ್ದ ಆದೇಶವನ್ನು ವಜಾ ಮಾಡಿದ್ದ ಆಂಧ್ರ ಹೈಕೋರ್ಟ್‌, ಅರ್ಜಿದಾರ ನಿಮ್ಮಾಗದ್ದ ರಮೇಶಕುಮಾರ್ ಅವರನ್ನು ಈ ಹುದ್ದೆಯಲ್ಲಿ ಮುಂದುವರಿಸಲು ಆದೇಶಿಸಿತ್ತು.

ವೈಎಸ್ಆರ್ ಕಾಂಗ್ರೆಸ್ ಸರ್ಕಾರ ಏಪ್ರಿಲ್ 10 ರಂದು ರಮೇಶ್ ಕುಮಾರ್ ಅವರನ್ನು ಹಠಾತ್ತನೆ ಎಸ್ಇಸಿ ಹುದ್ದೆಯಿಂದ ಕೆಳಗಳಿಸಿ, ಆಂಧ್ರ ಪ್ರದೇಶ ಪಂಚಾಯತ್ ರಾಜ್ ಕಾಯ್ದೆ 1994ಕ್ಕೆ ತಿದ್ದುಪಡಿ ಮಾಡಿ, ಎಸ್‌ಇಸಿಯ ಅಧಿಕಾರಾವಧಿಯನ್ನು ಐದರಿಂದ ಮೂರು ವರ್ಷಕ್ಕೆ ಮೊಟಕುಗೊಳಿಸಿ ಸುಗ್ರೀವಾಜ್ಞೆ ಹೊರಡಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.