ADVERTISEMENT

ಟಿಡಿಪಿ ಅವಧಿಯ ಭ್ರಷ್ಟಾಚಾರ ತನಿಖೆ; ಹೈಕೋರ್ಟ್‌ ನೀಡಿದ್ದ ತಡೆಯಾಜ್ಞೆ ತೆರವು

ಪಿಟಿಐ
Published 3 ಮೇ 2023, 16:34 IST
Last Updated 3 ಮೇ 2023, 16:34 IST
ಸುಪ್ರೀಂಕೋರ್ಟ್‌
ಸುಪ್ರೀಂಕೋರ್ಟ್‌   

ನವದೆಹಲಿ: ಆಂಧ್ರಪ್ರದೇಶದ ರಾಜಧಾನಿಯಾಗಿ ಅಮರಾವತಿಯನ್ನು ಅಭಿವೃದ್ಧಿಪಡಿಸುವ ಸಂಬಂಧ ತೆಲುಗು ದೇಶಂ ಪಕ್ಷದ ಅಧಿಕಾರಾವಧಿಯಲ್ಲಿ ನಡೆದಿರುವ ಭ್ರಷ್ಟಾಚಾರ ಮತ್ತು ಅಧಿಕಾರ ದುರುಪಯೋಗದ ಬಗ್ಗೆ ತನಿಖೆ ಮುಂದುವರಿಸಲು ಸುಪ್ರೀಂ ಕೋರ್ಟ್‌ ಮುಖ್ಯಮಂತ್ರಿ ಜಗಮೋಹನ್‌ ರೆಡ್ಡಿ ಸರ್ಕಾರಕ್ಕೆ ಹಸಿರು ನಿಶಾನೆ ನೀಡಿದೆ.

ತನಿಖೆಯು ಇನ್ನೂ ಆರಂಭದ ಹಂತದಲ್ಲಿರುವಾಗಲೇ ಹೈಕೋರ್ಟ್‌ ತಡೆಯಾಜ್ಞೆ ನೀಡುವ ಅಗತ್ಯವಿಲ್ಲ ಎಂದು ನ್ಯಾಯಮೂರ್ತಿಗಳಾದ ಎಂ.ಆರ್‌. ಶಾ ಮತ್ತು ಎಂ.ಎಂ. ಸುಂದರೇಶ್‌ ಅವರನ್ನೊಳಗೊಂಡ ಪೀಠ ಅಭಿಪ್ರಾಯಪಟ್ಟಿದ್ದು, ಮೂರು ತಿಂಗಳೊಳಗೆ ಈ ಅರ್ಜಿಯ ವಿಚಾರಣೆಯನ್ನು ಇತ್ಯರ್ಥಗೊಳಿಸಲು ಆಂಧ್ರಪ್ರದೇಶದ ಹೈಕೋರ್ಟ್‌ಗೆ ನಿರ್ದೇಶನ ನೀಡಿದೆ.

ಭ್ರಷ್ಟಾಚಾರ ವಿರುದ್ಧದ ತನಿಖೆಯು ರಾಜಕೀಯ ಪ್ರೇರಿತವಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದಿದ್ದ ಹೈಕೋರ್ಟ್‌, ತನಿಖೆ ನಡೆಸದಂತೆ ಮಧ್ಯಂತರ ತಡೆ ನೀಡಿತ್ತು. ಆದರೆ, ಸುಪ್ರೀಂ ಕೋರ್ಟ್‌ ಇದನ್ನು ತೆರವುಗೊಳಿಸಿದೆ. 

ADVERTISEMENT

2019ರ ಜೂನ್‌ 19ರಂದು ಮತ್ತು 2020ರ ಫೆಬ್ರುವರಿ 21ರಂದು ತಾನು ಭ್ರಷ್ಟಾಚಾರ ಮತ್ತು ಅಧಿಕಾರ ದುರ್ಬಳಕೆ ಸಂಬಂಧ ತನಿಖೆ ನಡೆಸಲು ಹೊರಡಿಸಿದ್ದ ಆದೇಶವನ್ನು ತಪ್ಪಾಗಿ ಅರ್ಥೈಸಿಕೊಂಡು ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ. ಇದಕ್ಕೆ ತಡೆ ನೀಡಬೇಕು ಎಂದು ಜಗಮೋಹನ್‌ ರೆಡ್ಡಿ ಸರ್ಕಾರವು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.