ADVERTISEMENT

ಅಧಿಕಾರಿಯ ಚಾಲಕ ಆತ್ಮಹತ್ಯೆ ಪ್ರಕರಣ: ಹೈಕೋರ್ಟ್ ಆದೇಶ ಅನೂರ್ಜಿತಗೊಳಿಸಿದ ಸುಪ್ರೀಂ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2021, 16:28 IST
Last Updated 31 ಅಕ್ಟೋಬರ್ 2021, 16:28 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ:ವಿಶೇಷ ಭೂಸ್ವಾಧೀನಾಧಿಕಾರಿ ವಿರುದ್ಧ ವಾಹನ ಚಾಲಕನ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ್ದ ಗಂಭೀರ ಆರೋಪವಿದ್ದ ಪ್ರಕರಣವನ್ನು ವಜಾ ಮಾಡಿದ್ದ ಕರ್ನಾಟಕ ಹೈಕೋರ್ಟ್‌ ಆದೇಶವನ್ನು ಸುಪ್ರೀಂ ಕೋರ್ಟ್‌ ಅನೂರ್ಜಿತಗೊಳಿಸಿದೆ. ‘ಆತ್ಮಹತ್ಯೆ ಮಾಡಿಕೊಂಡಿದ್ದ ವಾಹನ ಚಾಲಕ ದುರ್ಬಲ ಮನಸ್ಸಿನವನು ಎಂದು ಹೈಕೋರ್ಟ್‌ ಆದೇಶದಲ್ಲಿ ಉಲ್ಲೇಖಿಸಿದ್ದು, ಇದೇ ಆಧಾರದಲ್ಲಿ ವಿಶೇಷ ಭೂಸ್ವಾಧೀನಾಧಿಕಾರಿ ವಿರುದ್ಧದ ಪ್ರಕರಣ ವಜಾ ಆಗಿತ್ತು.

ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ಮತ್ತು ಬಿ.ವಿ.ನಾಗರತ್ನ ಅವರಿದ್ದ ಪೀಠವು, ‘ವ್ಯಕ್ತಿಯ ನಡವಳಿಕೆ ಅಧ್ಯಯನ ಮಾಡುವ ತಜ್ಞರು ವ್ಯಕ್ತಿಗಳ ವರ್ತನೆ ಕುರಿತ ಅಧ್ಯಯನದಲ್ಲಿ ವ್ಯಕ್ತಿಗಳ ವರ್ತನೆಗಳು ಏಕಪ್ರಕಾರವಾಗಿರುತ್ತವೆ ಎಂಬ ಅಭಿಪ್ರಾಯವನ್ನು ತಳ್ಳಿಹಾಕುತ್ತಾರೆ’ ಎಂದೂ ಉಲ್ಲೇಖಿಸಿತು.

ಕರ್ನಾಟಕ ಹೈಕೋರ್ಟ್‌ನ ಏಕಸದಸ್ಯ ಪೀಠವು ಮೇ 29, 2020ರಂದು ನೀಡಿದ್ದ ಆದೇಶದಲ್ಲಿ ಉಲ್ಲೇಖಿಸಿದ್ದ, ತೀವ್ರ ಖಿನ್ನತೆಗೆ ಒಳಗಾಗುವ ಮನುಷ್ಯ, ಮಾನಸಿಕ ಆರೋಗ್ಯದ ಮೇಲೆ ಸ್ಥಿಮಿತವನ್ನು ಕಳೆದುಕೊಳ್ಳಲಿದ್ದಾನೆ ಎಂಬ ಅಭಿಪ್ರಾಯವನ್ನು ಪ್ರಮುಖವಾಗಿ ಗಮನಿಸಿತು.

ಆದಾಯ ಮೀರಿದ ಆಸ್ತಿ ಹೊಂದಿರುವ ಗಂಭೀರ ಆರೋಪ ಎದುರಿಸುತ್ತಿರುವ ವಿಶೇಷ ಭೂಸ್ವಾಧೀನಾಧಿಕಾರಿಯ ವಾಹನ ಚಾಲಕರಾಗಿದ್ದ ವ್ಯಕ್ತಿಯು ಆತ್ಮಹತ್ಯೆ ಮಾಡಿಕೊಂಡಿದ್ದರು. ‘ಸಾವಿಗೆ ಮುನ್ನ ಬರೆದಿದ್ದ ಮರಣಪತ್ರದಲ್ಲಿ ಆರೋಪಿ ಅಧಿಕಾರಿಯ ಪಾತ್ರ, ಕೃತ್ಯಕ್ಕೆ ಕಾರಣವಾದ ಅಂಶಗಳ ವಿವರಗಳಿವೆ. ತನಿಖೆಯಲ್ಲಿ ಇದನ್ನು ಪರಿಗಣಿಸಬೇಕು ಎಂದು ಸುಪ್ರೀಂ ಕೋರ್ಟ್‌ನ ಪೀಠವು ಅಭಿಪ್ರಾಯಪಟ್ಟಿತು.

ADVERTISEMENT

ಡಿಸೆಂಬರ್ 6, 2019ರಂದು ಆತ್ಮಹತ್ಯೆ ಮಾಡಿಕೊಂಡಿದ್ದವಾಹನ ಚಾಲಕ, ಕೆ.ಸಿ.ರಮೇಶ್ ಅವರ ಸಹೋದರ ಮಹೇಂದ್ರ ಕೆ.ಸಿ ಸಲ್ಲಿಸಿದ್ದ ಅರ್ಜಿಯನ್ನು ಪೀಠ ಮಾನ್ಯ ಮಾಡಿತು. ರಮೇಶ್‌ ಅವರ ಮರಣಪತ್ರದಲ್ಲಿ ಕೆಎಎಸ್‌ ಅಧಿಕಾರಿ ಎಲ್‌.ಭೀಮನಾಯ್ಕ ವಿರುದ್ಧ ಬೆದರಿಕೆ, ಕಿರುಕುಳ ಆರೋಪಗಳಿದ್ದವು. ಮರಣಪತ್ರವನ್ನು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್‌ ಮಾಡಿದ್ದು, ಅಧಿಕಾರಿಯು ₹100 ಕೋಟಿಗೂ ಹೆಚ್ಚು ಆಸ್ತಿ ಸಂಪಾದಿಸಿದ್ದಾರೆ ಎಂದು ಉಲ್ಲೇಖಿಸಿದ್ದರು.

ಹೈಕೋರ್ಟ್‌ನ ಪೀಠವು ವಿಚಾರಣೆ ವೇಳೆ ಸಿಆರ್‌ಪಿಸಿ ಸೆಕ್ಷನ್‌ 482 ಪರಿಗಣಿಸುವಾಗ ಪ್ರಕರಣದ ಪ್ರಾಮುಖ್ಯತೆಗೆ ಗಮನನೀಡುವ ಬದಲಿಗೆ, ಮಾನಸಿಕ ಆರೋಗ್ಯ ಕುರಿತು ಹೆಚ್ಚಿನ ಆದ್ಯತೆ ನೀಡಿದೆ. ಮನುಷ್ಯನ ಮಾನಸಿಕ ಆರೋಗ್ಯವನ್ನು ಒಂದೇ ರೀತಿ ಪರಿಗಣಿಸಲಾಗದು ಎಂದು ಪೀಠ ಅಭಿಪ್ರಾಯಪಟ್ಟಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.