ADVERTISEMENT

ಗಲಭೆ ಪ್ರಕರಣದಲ್ಲಿ ಹಾರ್ದಿಕ್ ಪಟೇಲ್ ಅಪರಾಧಿ ಎಂಬ ತೀರ್ಪಿಗೆ ‘ಸುಪ್ರೀಂ’ ತಡೆ

ಪಿಟಿಐ
Published 12 ಏಪ್ರಿಲ್ 2022, 11:23 IST
Last Updated 12 ಏಪ್ರಿಲ್ 2022, 11:23 IST
ಹಾರ್ದಿಕ್ ಪಟೇಲ್
ಹಾರ್ದಿಕ್ ಪಟೇಲ್   

ನವದೆಹಲಿ: ಗಲಭೆ ಪ್ರಕರಣದಲ್ಲಿ ಗುಜರಾತ್‌ನ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ಹಾರ್ದಿಕ್ ಪಟೇಲ್ ಅವರಿಗೆ ಅಲ್ಲಿನ ಹೈಕೋರ್ಟ್ ಅಪರಾಧಿ ಎಂದು ಘೋಷಿಸಿದ ತೀರ್ಪಿಗೆ ಸುಪ್ರೀಂ ಕೋರ್ಟ್‌ ಮಂಗಳವಾರ ತಡೆ ನೀಡಿದೆ.

ಮುಖ್ಯ ನ್ಯಾಯಮೂರ್ತಿಗಳಾದ ಎಸ್‌.ಎ. ನಜೀರ್ ಮತ್ತು ವಿಕ್ರಮ್ ನಾಥ್ ಅವರನ್ನೊಳಗೊಂಡ ನ್ಯಾಯಪೀಠವು, ‘ಗುಜರಾತ್ ಹೈಕೋರ್ಟ್‌ ನೀಡಿದ್ದ ತೀರ್ಪಿಗೆ ತಡೆ ನೀಡುವುದು ಸೂಕ್ತ. ಮೇಲ್ಮನವಿಯನ್ನು ಇತ್ಯರ್ಥಪಡಿಸುವವರಿಗೆ ಈ ತಡೆಯಾಜ್ಞೆಯ ಆದೇಶವು ಜಾರಿಯಲ್ಲಿರುತ್ತದೆ’ ಎಂದು ಹೇಳಿದೆ.

ಆರಂಭದಲ್ಲಿ, ಹಿರಿಯ ವಕೀಲ ಮಣಿಂದರ್ ಸಿಂಗ್ ಅವರು ವಾದ ಮಂಡಿಸಿ, ‘ಹಾರ್ದಿಕ್‌ ಪಟೇಲ್ ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅನುಮತಿ ನೀಡದಿರುವುದು ಅವರ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಉಲ್ಲಂಘಿಸಿದಂತಾಗುತ್ತದೆ’ ಎಂದು ಹೇಳಿದರು.

ADVERTISEMENT

‘ನಾನು ಈಗಾಗಲೇ 2019ರ ಚುನಾವಣೆಯಲ್ಲಿ ಸ್ಪರ್ಧಿಸುವ ಒಂದು ಅವಕಾಶವನ್ನು ಕಳೆದುಕೊಂಡಿದ್ದೇನೆ. ಈ ಪ್ರಕರಣದಲ್ಲಿ ಪೊಲೀಸರು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ನ್ಯಾಯಾಲಯವು ಶೀಘ್ರವೇ ಈ ಪ್ರಕರಣವನ್ನು ಇತ್ಯರ್ಥಗೊಳಿಸಬೇಕು’ ಎಂದು ಹಾರ್ದಿಕ್ ಪಟೇಲ್ ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.

ಸರ್ಕಾರದ ಪರ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ‘ಮೂಲ ಅಂಶಗಳನ್ನು ಪರಿಗಣಿಸಿ ಹಾರ್ದಿಕ್ ಅವರನ್ನು ತಪ್ಪಿತಸ್ಥ ಎಂದು ಘೋಷಿಸಲಾಗಿದೆ’ ಎಂದರು. ಬಳಿಕ ನ್ಯಾಯಪೀಠವು ಇದಕ್ಕೆ ತಡೆಯಾಜ್ಞೆ ನೀಡಿತು.

ಪಾಟಿದಾರ್ ಸಮುದಾಯಕ್ಕೆ ಮೀಸಲಾತಿ ನೀಡುವಂತೆ ಆಗ್ರಹಿಸಿ 2015ರಲ್ಲಿ ಹಾರ್ದಿಕ್ ಪಟೇಲ್ ಚಳವಳಿಯ ನೇತೃತ್ವ ವಹಿಸಿದ್ದರು. ಈ ವೇಳೆ ಹಿಂಸಾಚಾರ ಭುಗಿಲೆದ್ದು ಬಿಜೆಪಿ ಶಾಸಕರ ಕಚೇರಿ ಧ್ವಂಸಗೊಂಡಿತ್ತು. ಈ ಸಂಬಂಧದ ಪ್ರಕರಣದಲ್ಲಿ ಹಾರ್ದಿಕ್‌ ಅವರು ದೋಷಿ ಎಂದು 2018ರ ಜುಲೈ 15ರಂದು ಸೆಷೆನ್ಸ್‌ ನ್ಯಾಯಾಲಯ ತೀರ್ಪು ನೀಡಿತ್ತು. ಈ ತೀರ್ಪಿಗೆ ತಡೆಯಾಜ್ಞೆ ನೀಡುವಂತೆ ಕೋರಿ ಪಟೇಲ್ 2019ರ ವಿಧಾನಸಭಾ ಚುನಾವಣೆ ವೇಳೆ ಗುಜರಾತ್ ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ, ಹೈಕೋರ್ಟ್ ಈ ಅರ್ಜಿಯನ್ನು ತಿರಸ್ಕರಿಸಿತ್ತು. ಇದೇ ಡಿಸೆಂಬರ್‌ನಲ್ಲಿ ಗುಜರಾತ್‌ನಲ್ಲಿ ವಿಧಾನಸಭಾ ಚುನಾವಣೆಗಳು ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಹಾರ್ದಿಕ್ ಪಟೇಲ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

ಚುನಾವಣೆಗೆ ಸ್ಪರ್ಧೆ: ಹಾರ್ದಿಕ್ ಪಟೇಲ್

ನವದೆಹಲಿ: ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದ ಬೆನ್ನಲ್ಲೇ, ‘ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದು ಮಾತ್ರವಲ್ಲದೆ ಜನರ ಸೇವೆಯೂ ನನ್ನ ಗುರಿಯಾಗಿದೆ’ ಎಂದು ಗುಜರಾತ್ ಕಾಂಗ್ರೆಸ್ ನಾಯಕ ಹಾರ್ದಿಕ್ ಪಟೇಲ್ ಮಂಗಳವಾರ ಹೇಳಿದ್ದಾರೆ.

‘ನಾನು ನ್ಯಾಯಾಂಗಕ್ಕೆ ಹೃದಯಪೂರ್ವಕವಾಗಿ ಧನ್ಯವಾದ ಹೇಳುತ್ತೇನೆ’ ಎಂದೂ ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.