ADVERTISEMENT

2013ರ ನೇಮಕಾತಿ ಅಕ್ರಮ: ಇಲಾಖಾ ವಿಚಾರಣೆಗೆ ‘ಸುಪ್ರೀಂ’ ತಡೆ

ಸಹಾಯಕ ಸರ್ಕಾರಿ ಅಭಿಯೋಜಕರ ನೇಮಕದಲ್ಲಿ ಅಕ್ರಮ ಆರೋಪ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2022, 18:55 IST
Last Updated 20 ಫೆಬ್ರುವರಿ 2022, 18:55 IST
ಸುಪ್ರೀಂಕೋರ್ಟ್‌
ಸುಪ್ರೀಂಕೋರ್ಟ್‌   

ನವದೆಹಲಿ: ಕರ್ನಾಟಕದಲ್ಲಿ 2013ರಲ್ಲಿ ನಡೆದ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮಕ್ಕೆ ಸಂಬಂಧಿಸಿದಂತೆ ಸಹಾಯಕ ಸರ್ಕಾರಿ ಅಭಿಯೋಜಕರ ವಿರುದ್ಧ ಉಪಲೋಕಾಯುಕ್ತರ ವರದಿ ಆಧರಿಸಿ ನಡೆಯುತ್ತಿದ್ದ ವಿಚಾರಣೆಗೆ ಸುಪ್ರೀಂಕೋರ್ಟ್‌ ತಡೆಯಾಜ್ಞೆ ನೀಡಿದೆ.

ನೇಮಕಾತಿ ಪ್ರಕ್ರಿಯೆಯಲ್ಲಿ ಆಯ್ಕೆಗೊಳ್ಳದಿದ್ದ ಎಚ್‌.ಟಿ.ರವಿ ಅವರು ಆಗಿನ ಪ್ರಾಸಿಕ್ಯೂಷನ್‌ ನಿರ್ದೇಶಕ ಚಂದ್ರಶೇಖರ್‌ ಹಿರೇಮಠ, ಇನ್ನೊಬ್ಬ ಸಿಬ್ಬಂದಿ ವಿರುದ್ಧ ನೀಡಿದ್ದ ದೂರು ಆಧರಿಸಿ ವಿಚಾರಣೆ ನಡೆಸಲಾಗುತ್ತಿತ್ತು.

ಈ ಬಗ್ಗೆ ಸರೋಜಿನಿ ವೀರಪ್ಪ ಬಟಕುರ್ಕಿ ಮತ್ತು ಇತರರ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಂಡ ನ್ಯಾಯಮೂರ್ತಿ ಎಲ್‌.ನಾಗೇಶ್ವರರಾವ್ ಮತ್ತು ಪಿ.ಎಸ್‌.ನರಸಿಂಹ ಅವರಿದ್ದ ಪೀಠವು ಇಲಾಖಾ ವಿಚಾರಣೆಗೆ ತಡೆಯಾಜ್ಞೆ ನೀಡಿತು.

ADVERTISEMENT

ಅರ್ಜಿದಾರರ ಪರವಾಗಿ ಹಿರಿಯ ವಕೀಲ ಬಸವ ಪ್ರಭು ಎಸ್‌ ಪಾಟೀಲ ಮತ್ತು ವಕೀಲರಾದ ಚಿನ್ಮಯ್‌ ದೇಶಪಾಂಡೆ ಮತ್ತು ಅನಿರುದ್ಧ್‌ ಸಂಗನೇರಿಯಾ ಅವರು ಹಾಜರಿದ್ದರು. ಉಪಲೋಕಾಯುಕ್ತರ ಪರವಾಗಿ ವಕೀಲರಾದ ಶೈಲೇಶ್‌ ಮಡಿಯಾಳ್‌ ಮತ್ತು ನಿಶಾಂತ್ ಪಾಟೀಲ್‌ ಹಾಜರಿದ್ದು, ‘ವಿಚಾರಣೆಯನ್ನು ನಾಲ್ಕು ತಿಂಗಳಲ್ಲಿ ಪೂರ್ಣಗೊಳಿಸಬೇಕು ಎಂದು ಹೈಕೋರ್ಟ್‌ ನಿರ್ದೇಶನ ನೀಡಿದೆ’ ಎಂಬುದನ್ನು ಪೀಠದ ಗಮನಕ್ಕೆ ತಂದರು.ಇದೇ ಸಂದರ್ಭದಲ್ಲಿ ಪೀಠವು ಅರ್ಜಿಗಳನ್ನು ಇತ್ಯರ್ಥಪಡಿಸುವವರೆಗೂ ಇಲಾಖಾ ವಿಚಾರಣೆಯನ್ನು ಕೈಗೊಳ್ಳಬಾರದು ಎಂದು ಪೀಠವು ತಿಳಿಸಿತು.

ಸಹಾಯಕ ಸರ್ಕಾರಿ ಅಭಿಯೋಜಕರ ಹುದ್ದೆಗೆ ಸುಮಾರು 60 ಜನರು ನೇಮಕಗೊಂಡಿದ್ದು, ವಿಚಾರಣೆ ಎದುರಿಸುತ್ತಿದ್ದಾರೆ.

ಆಯ್ಕೆ ಪ್ರಶ್ನಿಸಿದ್ದವರಲ್ಲಿ 9 ಮಂದಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರೆ, ಉಳಿದವರ ಅರ್ಜಿಯ ವಿಚಾರಣೆಯು ಹೈಕೋರ್ಟ್‌ನಲ್ಲಿ ಬಾಕಿ ಉಳಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.