ನವದೆಹಲಿ: ಕೊಲೆ ಮೊಕದ್ದಮೆಯಲ್ಲಿ ಜೀವಾವಧಿ ಶಿಕ್ಷೆಗೆ ಈಡಾಗಿರುವ ಗ್ಯಾಂಗ್‌ಸ್ಟರ್, ರಾಜಕಾರಣಿ ಅರುಣ್ ಗಾವ್ಳಿಯನ್ನು ಅವಧಿಪೂರ್ವದಲ್ಲಿಯೇ ಬಿಡುಗಡೆ ಮಾಡುವುದಕ್ಕೆ ತಡೆ ನೀಡಿ ಸುಪ್ರೀಂ ಕೋರ್ಟ್ ಸೋಮವಾರ ಆದೇಶ ನೀಡಿದೆ.
2006ರ ಕ್ಷಮಾಪಣಾ ನೀತಿ ಅಡಿ ಗಾವ್ಳಿಯನ್ನು ಅವಧಿಪೂರ್ವವಾಗಿ ಬಿಡುಗಡೆ ಮಾಡಬಹುದೇ ಎಂಬ ಕುರಿತು ಪರಿಶೀಲನೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠ ಏಪ್ರಿಲ್ 5ರಂದು ಆದೇಶ ನೀಡಿತ್ತು.
ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ಸಂದೀಪ್ ಮಹ್ತಾ ಅವರಿದ್ದ ರಜಾ ಪೀಠವು ಹೈಕೋರ್ಟ್ ಆದೇಶಕ್ಕೆ ತಡೆ ನೀಡಿದೆ.
ಮಹಾರಾಷ್ಟ್ರ ಸರ್ಕಾರದ ಪರ ಕೋರ್ಟ್‌ನಲ್ಲಿ ಹಾಜರಿದ್ದ ಹಿರಿಯ ವಕೀಲ ರಾಜಾ ಠಾಕರೆ ಅವರು, ‘ಮಹಾರಾಷ್ಟ್ರ ಸಂಘಟಿತ ಅಪರಾಧಗಳ ತಡೆ ಕಾಯ್ದೆ (ಎಂಸಿಒಸಿಎ) ಅಡಿ ಗಾವ್ಳಿ ಅಪರಾಧ ಸಾಬೀತಾಗಿದೆ. ಆದರೆ, ಅವರು ಈಗ 2006ರ ಕ್ಷಮಾಪಣಾ ಕಾಯ್ದೆ ಅಡಿ ಅವಧಿಪೂರ್ವ ಬಿಡುಗಡೆ ಕೋರಿದ್ದಾರೆ’ ಎಂದು ಪೀಠದ ಎದುರು ಹೇಳಿದರು. ಬಳಿಕ ಪೀಠವು ಹೈಕೋರ್ಟ್ ಆದೇಶಕ್ಕೆ ತಡೆ ನೀಡಿತು.
ಗಾವ್ಳಿಯನ್ನು ಅವಧಿಪೂರ್ವ ಬಿಡುಗಡೆ ಮಾಡುವುದನ್ನು ಹೈಕೋರ್ಟ್ ಎದುರು ಈ ಹಿಂದೆಯೇ ವಿರೋಧಿಸಿದ್ದ ರಾಜ್ಯ ಸರ್ಕಾರವು, 2010ರ ಮೇ 18ರಂದು ಪರಿಷ್ಕರಿಸಲಾದ ನಿಯಮಾವಳಿಗಳ ಪ್ರಕಾರ, ಸಂಘಟಿತ ಅಪರಾಧದಲ್ಲಿ ಭಾಗಿಯಾಗಿರುವ ಅಪರಾಧಿಯು 40 ವರ್ಷಗಳ ಕಾಲ ಜೈಲು ಶಿಕ್ಷೆಗೆ ಒಳಗಾಗದ ಹೊರತು ಆತನನ್ನು ಬಿಡುಗಡೆ ಮಾಡುವಂತಿಲ್ಲ ಎಂದು ಹೇಳಿತ್ತು. ಆದರೆ ಹೈಕೋರ್ಟ್ ಈ ವಾದವನ್ನು ತಳ್ಳಿಹಾಕಿತ್ತು.
ಶಿವಸೇನಾ ಕಾರ್ಪೊರೇಟರ್ ಕಮಲಾಕರ್ ಜಾಮ್‌ಸಂದೇಕರ್ ಅವರನ್ನು 2007ರಲ್ಲಿ ಹತ್ಯೆಗೈದಿದ್ದ ಪ್ರಕರಣದಲ್ಲಿ ಗಾಳ್ವಿ ಅವರು ತಪ್ಪಿತಸ್ಥರೆಂದು ಸಾಬೀತಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.