ADVERTISEMENT

ಇವಿಎಂ ದತ್ತಾಂಶ ಅಳಿಸದಂತೆ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್‌ ಸೂಚನೆ

​ಪ್ರಜಾವಾಣಿ ವಾರ್ತೆ
ಪಿಟಿಐ
Published 11 ಫೆಬ್ರುವರಿ 2025, 15:54 IST
Last Updated 11 ಫೆಬ್ರುವರಿ 2025, 15:54 IST
<div class="paragraphs"><p>ಸುಪ್ರೀಂ ಕೋರ್ಟ್‌</p></div>

ಸುಪ್ರೀಂ ಕೋರ್ಟ್‌

   

ನವದೆಹಲಿ: ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ಪರಿಶೀಲನಾ ಪ್ರಕ್ರಿಯೆ ಸಂದರ್ಭದಲ್ಲಿ ಅದರಲ್ಲಿನ ದತ್ತಾಂಶಗಳನ್ನು ಅಳಿಸಬೇಡಿ ಅಥವಾ ರಿಲೋಡ್‌ ಮಾಡಬೇಡಿ ಎಂದು ಸುಪ್ರೀಂ ಕೋರ್ಟ್‌ ಮಂಗಳವಾರ ಚುನಾವಣಾ ಆಯೋಗಕ್ಕೆ ಸೂಚಿಸಿದೆ.

ಇವಿಎಂನ ಮೈಕ್ರೋಕಂಟ್ರೋಲರ್‌ ಮತ್ತು ‘ಸಿಂಬಲ್ ಲೋಡಿಂಗ್ ಯೂನಿಟ್’ಗಳನ್ನು (ಎಸ್‌ಎಲ್‌ಯು) ಪರಿಶೀಲಿಸಲು ಅನುಮತಿ ನೀಡುವಂತೆ ಕೋರಿ ಅಸೋಸಿಯೇಷನ್‌ ಫಾರ್‌ ಡೆಮಾಕ್ರಟಿಕ್‌ ರಿಫಾರ್ಮ್ಸ್‌ (ಎಡಿಆರ್‌) ಸಂಸ್ಥೆಯು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾಯಮೂರ್ತಿ ಸಂಜೀವ್‌ ಖನ್ನಾ ಮತ್ತು ನ್ಯಾಯಮೂರ್ತಿಗಳಾದ ದೀಪಾಂಕರ್‌ ದತ್ತಾ ಅವರನ್ನೊಳಗೊಂಡ ಪೀಠವು ಈ ಸೂಚನೆ ನೀಡಿದೆ.

ADVERTISEMENT

ಇವಿಎಂಗಳ ಪರಿಶೀಲನೆಗೆ ಆಯೋಗವು ರೂಪಿಸಿರುವ ಪ್ರಮಾಣಿತ ಕಾರ್ಯಾಚರಣೆ ವಿಧಾನವು (ಎಸ್‌ಒಪಿ), ಸುಪ್ರೀಂ ಕೋರ್ಟ್‌ 2024ರ ಏಪ್ರಿಲ್‌ 26ರಂದು ನೀಡಿರುವ ತೀರ್ಪಿಗೆ ಅನುಗುಣವಾಗಿಲ್ಲ ಎಂದು ಅರ್ಜಿಯಲ್ಲಿ ಹೇಳಲಾಗಿದ್ದು, ಆ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಚುನಾವಣಾ ಆಯೋಗಕ್ಕೆ ಸೂಚಿಸಿದೆ.

ಎಡಿಆರ್ ಪರ ವಾದ ಮಂಡಿಸಿದ ಹಿರಿಯ ವಕೀಲ ಪ್ರಶಾಂತ ಭೂಷಣ್, ಇವಿಎಂಗಳ ಪರಿಶೀಲನೆಗೆ ಸಂಬಂಧಿಸಿದ ಆಯೋಗದ ಎಸ್‌ಒಪಿಗಳು ನ್ಯಾಯಾಲಯದ ತೀರ್ಪಿನ ಪ್ರಕಾರ ಇಲ್ಲ. ಆಯೋಗವು 2024ರ ಜೂನ್‌ 1 ಮತ್ತು ಜುಲೈ 16ರಂದು ಹೊರಡಿಸಿರುವ ಎಸ್‌ಒಪಿಗಳು ಇವಿಎಂಗಳ ಬರ್ನ್ಟ್‌ ಮೆಮೊರಿ (ಪ್ರೋಗ್ರಾಮಿಂಗ್‌) ಅಥವಾ ಮೈಕ್ರೋಕಂಟ್ರೋಲರ್‌ ಮತ್ತು ಸಿಂಬಲ್‌ ಲೋಡಿಂಗ್‌ ಯೂನಿಟ್‌ಗಳನ್ನು ಪರಿಶೀಲಿಸಲು ಸಾಕಷ್ಟು ಮಾರ್ಗಸೂಚಿಗಳನ್ನು ಹೊಂದಿಲ್ಲ ಎಂದು ಪೀಠಕ್ಕೆ ತಿಳಿಸಿದರು.

‘ಇವಿಎಂಗಳಲ್ಲಿನ ಮತದಾನದ ದತ್ತಾಂಶವನ್ನು ಅಳಿಸುವುದು ಅಥವಾ ರಿಲೋಡ್‌ ಮಾಡುವುದು ತನ್ನ ತೀರ್ಪಿನಲ್ಲಿರುವ ನಿರ್ದೇಶನ ಅಲ್ಲ’ ಎಂದು ಪೀಠವು ಆಯೋಗದ ಪರ ಹಾಜರಿದ್ದ ಹಿರಿಯ ವಕೀಲ ಮಣಿಂದರ್‌ ಸಿಂಗ್‌ ಅವರಿಗೆ ತಿಳಿಸಿತು.

‘ಫಲಿತಾಂಶದ ಬಗ್ಗೆ ಅಭ್ಯರ್ಥಿಗಳಿಗೆ ತಕರಾರು ಇದ್ದರೆ, ಇವಿಎಂಗಳಲ್ಲಿನ ಬರ್ನ್ಟ್‌ ಮೆಮೊರಿಯನ್ನು ಇವಿಎಂ ತಯಾರಕ ಕಂಪನಿಯ ಎಂಜಿನಿಯರ್‌ಗಳು ಅಭ್ಯರ್ಥಿಗಳ ಎದುರು ಪರಿಶೀಲಿಸಬೇಕು. ನೀವು ದತ್ತಾಂಶವನ್ನು ಏಕೆ ಅಳಿಸುತ್ತೀರಿ’ ಎಂದು ಪ್ರಶ್ನಿಸಿದ ಪೀಠ, ಮುಂದಿನ ವಿಚಾರಣೆಯನ್ನು ಮಾರ್ಚ್‌ 3ರ ಬಳಿಕ ಕೈಗೆತ್ತಿಕೊಳ್ಳುವುದಾಗಿ ಹೇಳಿತು.

ಫಲಿತಾಂಶ ಪ್ರಕಟವಾದ ನಂತರ 45 ದಿನಗಳವರೆಗೂ ಎಸ್‌ಎಲ್‌ಯುಗಳನ್ನು ಹಾಗೇ ಇರಿಸಬೇಕು. ತಕರಾರುಗಳು ಬಂದಲ್ಲಿ, ಅದನ್ನು ಪರಿಹರಿಸಲು ಇವಿಎಂಗಳ ಜತೆಗೆ ಎಸ್‌ಎಲ್‌ಯುಗಳನ್ನೂ ಬಳಸಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್‌ ಕಳೆದ ವರ್ಷ ಏಪ್ರಿಲ್‌ 26ರ ತನ್ನ ತೀರ್ಪಿನಲ್ಲಿ ನಿರ್ದೇಶನ ನೀಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.