ಸುಪ್ರೀಂ ಕೋರ್ಟ್
ನವದೆಹಲಿ: ಜಾರಿ ನಿರ್ದೇಶನಾಲಯದಿಂದ (ಇ.ಡಿ) ಸಮನ್ಸ್ ಪಡೆದಿರುವ ತಮಿಳುನಾಡಿನ ಜಿಲ್ಲಾಧಿಕಾರಿಗಳು ಇ.ಡಿ ಮುಂದೆ ಹಾಜರಾಗಬೇಕು ಎಂದು ಮಂಗಳವಾರ ಸೂಚಿಸಿರುವ ಸುಪ್ರೀಂ ಕೋರ್ಟ್, ಸಮನ್ಸ್ ಪಡೆದವರು ಅದನ್ನು ಗೌರವಿಸಬೇಕು ಮತ್ತು ಪ್ರತಿಕ್ರಿಯಿಸಿಬೇಕು ಎಂದು ಹೇಳಿದೆ.
ಮರಳು ಗಣಿಗಾರಿಕೆ ಹಗರಣದ ಪ್ರಕರಣ ಕುರಿತು ಜಿಲ್ಲಾಧಿಕಾರಿಗಳಿಗೆ ಇ.ಡಿ ಜಾರಿಗೊಳಿಸಿದ್ದ ಸಮನ್ಸ್‌ಗೆ ಕಳೆದ ವರ್ಷದ ನವೆಂಬರ್‌ನಲ್ಲಿ ತಡೆ ನೀಡಿದ್ದ ಮದ್ರಾಸ್ ಹೈಕೋರ್ಟ್‌ನ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿತು.
ಕಾನೂನಿನ ಕುರಿತ ತಪ್ಪು ಕಲ್ಪನೆಯಿಂದ ರಾಜ್ಯ ಸರ್ಕಾರವು ಸಮನ್ಸ್ ವಿರುದ್ಧ ಅರ್ಜಿ ಸಲ್ಲಿಸಿದಂತೆ ಮೇಲ್ನೋಟಕ್ಕೆ ಕಾಣುತ್ತದೆ ಎಂದು ಪೀಠ ಹೇಳಿದೆ.
ನ್ಯಾಯಮೂರ್ತಿಗಳಾದ ಬೇಲಾ ಎಂ ತ್ರಿವೇದಿ, ಪಂಕಜ್ ಮಿತ್ತಲ್ ಅವರ ಪೀಠವು, ಜಾರಿ ನಿರ್ದೇಶನಾಲಯದ ವಿರುದ್ಧ ಹೆಚ್ಚುವರಿ ಮುಖ್ಯಕಾರ್ಯದರ್ಶಿ, ಜಿಲ್ಲಾಧಿಕಾರಿ ಜತೆಗೆ ತಮಿಳುನಾಡು ರಾಜ್ಯವೂ ವಿಚಿತ್ರ ಮತ್ತು ಅಸಮಾನ್ಯವಾದ ರಿಟ್ ಅರ್ಜಿ ಸಲ್ಲಿಸಿದೆ. ಇದು ಪರೋಕ್ಷವಾಗಿ ತನಿಖೆಯನ್ನು ಸ್ಥಗಿತಗೊಳಿಸುವ ಅಥವಾ ಹಳಿತಪ್ಪಿಸುವಂತಿದೆ ಎಂದು ಹೇಳಿತು.
ಪಿಎಂಎಲ್‌ಎ ಕಾಯ್ದೆ ಸೆಕ್ಷನ್ 50ರ ಅಡಿಯಲ್ಲಿ ಇ.ಡಿ ಸಮನ್ಸ್ ನೀಡಿದರೆ ಅದನ್ನು ಗೌರವಿಸಬೇಕು ಮತ್ತು ಪ್ರತಿಕ್ರಿಯಿಸಿಬೇಕು ಎಂದು ಹೇಳಿದ ಪೀಠವು, ನಾಲ್ಕು ವಾರಗಳ ಬಳಿಕ ಮುಂದಿನ ವಿಚಾರಣೆಯನ್ನು ನಿಗದಿಪಡಿಸಿತು.
‘ಪ್ರಕರಣದ ತನಿಖೆಗೆ ನೆರವು ನೀಡುವಂತೆ ರಾಜ್ಯದ ಆಡಳಿತ ಯಂತ್ರವನ್ನು ಇ.ಡಿ ಕೇಳಿದರೆ, ಅದರಿಂದ ಸರ್ಕಾರಕ್ಕೆ ಯಾವ ರೀತಿಯಲ್ಲಿ ಹಾನಿ ಆಗುತ್ತದೆ?’ ಎಂದು ಕೋರ್ಟ್ ಸೋಮವಾರವಷ್ಟೇ ತಮಿಳುನಾಡು ಸರ್ಕಾರವನ್ನು ಪ್ರಶ್ನಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.