ADVERTISEMENT

ರಾಷ್ಟ್ರೀಯ ಪಾರಂಪರಿಕ ಸ್ಮಾರಕವಾಗಿ ‘ರಾಮ ಸೇತು’: ಸ್ವಾಮಿ ಅರ್ಜಿ ವಿಚಾರಣೆಗೆ ಅಸ್ತು

ಪಿಟಿಐ
Published 16 ಫೆಬ್ರುವರಿ 2023, 7:46 IST
Last Updated 16 ಫೆಬ್ರುವರಿ 2023, 7:46 IST
   

ನವದೆಹಲಿ: ರಾಮಸೇತುವನ್ನು ರಾಷ್ಟ್ರೀಯ ಪಾರಂಪರಿಕ ಸ್ಮಾರಕ ಎಂದು ಘೋಷಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ಕೋರಿ ರಾಜ್ಯಸಭೆಯ ಮಾಜಿ ಸದಸ್ಯ ಸುಬ್ರಮಣಿಯನ್ ಸ್ವಾಮಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ(ಪಿಐಎಲ್) ವಿಚಾರಣೆಗೆ ಸುಪ್ರೀಂ ಕೋರ್ಟ್ ಅಂಗೀಕರಿಸಿದೆ.

ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಪಿ.ಎಸ್. ನರಸಿಂಹ ಅವರನ್ನೊಳಗೊಂಡ ಪೀಠವು, ಸ್ವಾಮಿ ಅವರ ಮನವಿಯನ್ನು ಪುರಸ್ಕರಿಸಿದ್ದು, ರಾಮಸೇತು ಕುರಿತಂತೆ ಈವರೆಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಹೀಗಾಗಿ, ಪಿಐಎಲ್ ವಿಚಾರಣೆಗೆ ಅಂಗೀಕರಿಸಲಾಗುವುದು ಎಂದು ಹೇಳಿತು.

‘ಸಾಂವಿಧಾನಿಕ ಪೀಠದ ವಿಚಾರಣೆಗಳು ಅಂತ್ಯವಾದ ಬಳಿಕ ಈ ಕುರಿತ ಅರ್ಜಿಗಳನ್ನು ವಿಚಾರಣೆಗೆ ಅಂಗೀಕರಿಸಲಾಗುವುದು’ಎಂದು ಪೀಠ ಹೇಳಿದೆ.

ADVERTISEMENT

ರಾಷ್ಟ್ರೀಯ ರಾಜಧಾನಿ ಸೇವೆಗಳ ಮೇಲಿನ ನಿಯಂತ್ರಣ ಸೇರಿದಂತೆ ಹಲವು ಪ್ರಕರಣಗಳ ವಿಚಾರಣೆಯಲ್ಲಿ ಸದ್ಯ ಸಾಂವಿಧಾನಿಕ ಪೀಠ ತೊಡಗಿಸಿಕೊಂಡಿದೆ.

ರಾಮಸೇತುವನ್ನು ರಾಷ್ಟ್ರೀಯ ಪಾರಂಪರಿಕ ಸ್ಮಾರಕ ಎಂದು ಘೋಷಿಸುವ ಕುರಿತಂತೆ ಕೇಂದ್ರ ಸರ್ಕಾರ ಪರಿಶೀಲನೆ ನಡೆಸುತ್ತಿದೆ ಎಂದು ಜನವರಿ 19ರಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದರು.

ಈ ಬಗ್ಗೆ ನಿರ್ಧಾರಕ್ಕೆ ಬರಲು ಕೇಂದ್ರ ಸರ್ಕಾರಕ್ಕೆ ಸೂಚಿಸಿದ್ದ ಪೀಠವು, ಇದರಲ್ಲಿ ಸ್ವಾಮಿ ಅವರಿಗೆ ಅಸಮಾಧಾನವಿದ್ದರೆ ಮತ್ತೆ ಪೀಠದ ಮುಂದೆ ಬರುವಂತೆ ಸೂಚಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.