ನವದೆಹಲಿ: ವಕ್ಫ್ (ತಿದ್ದುಪಡಿ) ಕಾಯ್ದೆಯ ಹಲವು ಅಂಶಗಳ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿರುವ ಹೊಸ ಅರ್ಜಿಯನ್ನು ವಿಚಾರಣೆಗೆ ನಿಗದಿ ಮಾಡುವ ಬಗ್ಗೆ ಪರಿಶೀಲಿಸಲು ಸುಪ್ರೀಂ ಕೋರ್ಟ್ ಮಂಗಳವಾರ ಒಪ್ಪಿದೆ.
ಅರ್ಜಿದಾರರಾದ ಹರಿ ಶಂಕರ್ ಜೈನ್ ಮತ್ತು ಮಣಿ ಮುಂಜಾಲ್ ಎನ್ನುವವರ ಪರವಾಗಿ ವಕೀಲ ವಿಷ್ಣು ಶಂಕರ್ ಜೈನ್ ಮಂಡಿಸಿದ ವಾದವನ್ನು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರು ಇರುವ ವಿಭಾಗೀಯ ಪೀಠವು ಆಲಿಸಿತು.
ಎಐಎಂಐಎಂ ನಾಯಕ ಅಸಾದುದ್ದೀನ್ ಒವೈಸಿ ಹಾಗೂ ಇತರರು ಸಲ್ಲಿಸಿರುವ 10 ಅರ್ಜಿಗಳು ಸಿಜೆಐ ಇರುವ ತ್ರಿಸದಸ್ಯ ಪೀಠದ ಎದುರು ಬುಧವಾರ ವಿಚಾರಣೆಗೆ ಬರಲಿವೆ.
ವಕ್ಫ್ ಕಾಯ್ದೆಯಲ್ಲಿನ ಕೆಲವು ಅಂಶಗಳು ಸಂವಿಧಾನದ 14, 15, 21, 25, 26, 27 ಮತ್ತು 300(ಎ) ವಿಧಿಗಳನ್ನು ಉಲ್ಲಂಘಿಸುತ್ತವೆ ಎಂದು ಹೊಸ ಅರ್ಜಿಯಲ್ಲಿ ದೂರಲಾಗಿದೆ. ಕಾಯ್ದೆಯಲ್ಲಿನ ಅಂಶಗಳು ಮುಸ್ಲಿಂ ಸಮುದಾಯಕ್ಕೆ ‘ಅನಗತ್ಯವಾದ ಅನುಕೂಲ ಕಲ್ಪಿಸಿ ಸಮಾಜದಲ್ಲಿ ಅಸಮತೋಲನ ಸೃಷ್ಟಿಸುತ್ತವೆ ಮತ್ತು ಸೌಹಾರ್ದವನ್ನು ಹಾಳು ಮಾಡುತ್ತವೆ’ ಎಂದು ಹೇಳಲಾಗಿದೆ.
ಕಾನೂನಿನ ಕಾರಣದಿಂದಾಗಿ ವಕ್ಫ್ ಮಂಡಳಿಗಳು ಅತಿಯಾದ ಅಧಿಕಾರ ಪಡೆದಿವೆ, ಇದರಿಂದಾಗಿ ಸರ್ಕಾರಿ ಹಾಗೂ ಖಾಸಗಿ ಜಮೀನನ್ನು ಅದು ಭಾರಿ ಪ್ರಮಾಣದಲ್ಲಿ ಒತ್ತುವರಿ ಮಾಡಿಕೊಂಡಿವೆ ಎಂದು ದೂರಲಾಗಿದೆ.
ವಕ್ಫ್ ನೋಂದಾಯಿತ ಜಮೀನು 2013ರಲ್ಲಿ 18 ಲಕ್ಷ ಎಕರೆ ಇದ್ದಿದ್ದು 2025ರಲ್ಲಿ 39 ಲಕ್ಷ ಎಕರೆಗೆ ಹೆಚ್ಚಾಗಿದೆ ಎಂದು ಸಂಸತ್ತಿನಲ್ಲಿ ಕೇಂದ್ರ ಗೃಹ ಸಚಿವರು ನೀಡಿದ್ದ ಹೇಳಿಕೆಯನ್ನು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ವಕ್ಫ್ ಕಾಯ್ದೆಯ ಅಂಶಗಳು ಮುಸ್ಲಿಮೇತರರಿಗೆ ಅನ್ವಯ ಆಗಬಾರದು, ವಕ್ಫ್ ಹೆಸರಿನಲ್ಲಿ ನೋಂದಣಿ ಆಗಿರುವ ಗ್ರಾಮ ಪಂಚಾಯಿತಿಯ ಮತ್ತು ಇತರ ಸಾರ್ವಜನಿಕ ಜಮೀನನ್ನು ವಶಪಡಿಸಿಕೊಳ್ಳುವಂತೆ ಕೇಂದ್ರಕ್ಕೆ ಸೂಚಿಸಬೇಕು ಎಂದು ಕೋರಲಾಗಿದೆ.
ಜಾಮೀನು ಮಂಜೂರು
ಛತ್ತೀಸಗಢದಲ್ಲಿ ನಡೆದ ₹2,000 ಕೋಟಿ ಮೊತ್ತದ ಮದ್ಯ ಹಗರಣದಲ್ಲಿ ಮಾಜಿ ಐಎಎಸ್ ಅಧಿಕಾರಿ ಅನಿಲ್ ಟುಟೆಜಾ ಅವರಿಗೆ ಸುಪ್ರೀಂ ಕೋರ್ಟ್ ಮಂಗಳವಾರ ಜಾಮೀನು ನೀಡಿದೆ.
ಈ ಪ್ರಕರಣದಲ್ಲಿ 20 ಮಂದಿ ಆರೋಪಿಗಳು ಹಾಗೂ 30ಕ್ಕೂ ಹೆಚ್ಚು ಸಾಕ್ಷಿಗಳ ಹೇಳಿಕೆ ಪಡೆಯುವುದು ಬಾಕಿ ಇದೆ ಎಂದು ನ್ಯಾಯಮೂರ್ತಿಗಳಾದ ಅಭಯ್ ಎಸ್. ಓಕ ಮತ್ತು ಉಜ್ವಲ್ ಭೂಯಾನ್ ಅವರು ಇರುವ ವಿಭಾಗೀಯ ಪೀಠವು ಹೇಳಿದೆ.
ಜಾರಿ ನಿರ್ದೇಶನಾಲಯ (ಇ.ಡಿ) ದಾಖಲಿಸಿದ್ದ ದೂರು ಆಧರಿಸಿ ಟುಟೆಜಾ ಅವರನ್ನು 2024ರ ಏಪ್ರಿಲ್‌ನಲ್ಲಿ ಬಂಧಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.