ADVERTISEMENT

ದೇಶದ್ರೋಹ ಕಾನೂನಿನ ವ್ಯಾಖ್ಯಾನದ ಪರಿಶೀಲನೆ ಅಗತ್ಯ: ಸುಪ್ರೀಂ ಕೋರ್ಟ್

ಪತ್ರಿಕಾ ಮತ್ತು ವಾಕ್‌ ಸ್ವಾತಂತ್ರ್ಯದ ಹಕ್ಕುಗಳ ಹಿನ್ನೆಲೆಯಲ್ಲಿ ವ್ಯಾಖ್ಯಾನ

ಪಿಟಿಐ
Published 31 ಮೇ 2021, 12:10 IST
Last Updated 31 ಮೇ 2021, 12:10 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ಪತ್ರಿಕಾ ಮತ್ತು ವಾಕ್ ಸ್ವಾತಂತ್ರ್ಯದ ಹಕ್ಕುಗಳ ಹಿನ್ನೆಲೆಯಲ್ಲಿ ದೇಶದ್ರೋಹ ಕಾನೂನಿನ ವ್ಯಾಖ್ಯಾನವನ್ನು ಪರಿಶೀಲಿಸುವುದಾಗಿ ಸುಪ್ರೀಂ ಕೋರ್ಟ್ ಸೋಮವಾರ ತಿಳಿಸಿದೆ.

ವಸಾಹತುಷಾಹಿ ಕಾಲದ ಕಾನೂನಿನಡಿಯಲ್ಲಿ ಯಾವುದೇ ಬಲವಂತದ ಕ್ರಮ ಕೈಗೊಳ್ಳುವಂತಿಲ್ಲ ಎಂದಿರುವ ಸುಪ್ರೀಂ ಕೋರ್ಟ್, ತೆಲುಗು ವಾಹಿನಿಗಳಾದ ಟಿವಿ 5 ಮತ್ತು ಎಬಿಎನ್ ಆಂಧ್ರಜ್ಯೋತಿ ವಾಹಿನಿಗಳಿಗೆ ರಕ್ಷಣೆ ನೀಡಿದೆ.

ಟಿವಿ 5 ಮತ್ತು ಎಬಿಎನ್ ಆಂಧ್ರಜ್ಯೋತಿ ವಾಹಿನಿಗಳು ವೈಎಸ್‌ಆರ್ ಕಾಂಗ್ರೆಸ್‌ನ ಬಂಡಾಯ ಸಂಸದ ಕೆ. ರಘು ರಾಮಕೃಷ್ಣ ರಾಜು ಅವರ ಆಕ್ರಮಣಕಾರಿ ಭಾಷಣಗಳನ್ನು ಪ್ರಸಾರ ಮಾಡಿವೆ ಎಂದು ಆರೋಪಿಸಿ, ಈ ಎರಡೂ ವಾಹಿನಿಗಳ ವಿರುದ್ಧ ಆಂಧ್ರಪ್ರದೇಶದ ಪೊಲೀಸರು ದೇಶದ್ರೋಹದ ಪ್ರಕರಣ ದಾಖಲಿಸಿದ್ದರು.

ADVERTISEMENT

ಈ ಪ್ರಕರಣವನ್ನು ಆಲಿಸಿದ ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್, ಎಲ್.ಎನ್. ರಾವ್ ಮತ್ತು ಎಸ್‌. ರವೀಂದ್ರ ಭಟ್ ಅವರನ್ನೊಳಗೊಂಡ ನ್ಯಾಯಪೀಠವು, ‘ಐಪಿಸಿ 124ಎ (ದೇಶದ್ರೋಹ), ಐಪಿಸಿ 153 (ಎರಡು ಗುಂಪುಗಳ ನಡುವೆ ದ್ವೇಷ ಪ್ರಚೋದನೆ) ನಿಬಂಧನೆಗಳ ಅರ್ಥವಿವರಣೆಯ ಅಗತ್ಯವಿದೆ ಎಂಬುದನ್ನು ನಾವು ಮನಗಂಡಿದ್ದೇವೆ. ವಿಶೇಷವಾಗಿ ಪತ್ರಿಕಾ ಮತ್ತು ವಾಕ್‌ ಸ್ವಾತಂತ್ರ್ಯದ ಹಕ್ಕು ಹಿನ್ನೆಲೆಯಲ್ಲಿ ಈ ಕಾನೂನಿನ ವ್ಯಾಖ್ಯಾನವನ್ನು ಪರಿಶೀಲಿಸುವ ಅಗತ್ಯವಿದೆ’ ಎಂದು ತಿಳಿಸಿದೆ.

ಆಂಧ್ರಪ್ರದೇಶದ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಎರಡೂ ವಾಹಿನಿಗಳ ನೌಕರರು ಮತ್ತು ಸಿಬ್ಬಂದಿ ವಿರುದ್ಧ ಯಾವುದೇ ರೀತಿಯ ಬಲವಂತದ ಕ್ರಮ ಕೈಗೊಳ್ಳದಂತೆಯೂ ನ್ಯಾಯಾಲಯವು ತಡೆಯೊಡ್ಡಿದೆ.

ದೇಶದ್ರೋಹದ ಕಠಿಣ ದಂಡದ ಅಪರಾಧ ಸೇರಿದಂತೆ ವಿವಿಧ ಅಪರಾಧಗಳಿಗೆ ಸಂಬಂಧಿಸಿದಂತೆ ವಾಹಿನಿಗಳು ಸಲ್ಲಿಸಿರುವ ಮನವಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ನಾಲ್ಕು ವಾರಗಳಲ್ಲಿ ಪ್ರತಿಕ್ರಿಯೆ ನೀಡಬೇಕೆಂದು ನ್ಯಾಯಾಲಯವು ಸೂಚಿಸಿದೆ.

ದೇಶದ್ರೋಹ ಪ್ರಕರಣದಲ್ಲಿ ರಘು ರಾಮಕೃಷ್ಣ ರಾಜು ಅವರನ್ನು ಬಂಧಿಸಿರುವ ಸಿಐಡಿಯು, ಈ ಎರಡು ವಾಹಿನಿಗಳು ಸೇರಿದಂತೆ ಇತರರನ್ನೂ ಆರೋಪಿಗಳೆಂದು ಹೆಸರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.