ADVERTISEMENT

ತೀಸ್ತಾ ಜಾಮೀನು ಅರ್ಜಿ: ಆಗಸ್ಟ್‌ 30ಕ್ಕೆ ವಿಚಾರಣೆ ಮುಂದೂಡಿದ ‘ಸುಪ್ರೀಂ’

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2022, 15:24 IST
Last Updated 25 ಆಗಸ್ಟ್ 2022, 15:24 IST
ತೀಸ್ತಾ ಸೆಟಲ್‌ವಾಡ್‌
ತೀಸ್ತಾ ಸೆಟಲ್‌ವಾಡ್‌   

ನವದೆಹಲಿ (ಪಿಟಿಐ): ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್‌ವಾಡ್‌ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಆಗಸ್ಟ್‌ 30ರಂದು ಕೈಗೆತ್ತಿಕೊಳ್ಳುವುದಾಗಿ ಸುಪ್ರೀಂ ಕೋರ್ಟ್‌ ಗುರುವಾರ ಹೇಳಿದೆ.

ತೀಸ್ತಾ ಅವರ ಜಾಮೀನು ಅರ್ಜಿಯ ಕುರಿತು ಪ್ರತಿಕ್ರಿಯೆ ಸಲ್ಲಿಸುವಂತೆ ಸುಪ್ರೀಂ ಕೋರ್ಟ್‌ ಗುಜರಾತ್‌ ಸರ್ಕಾರಕ್ಕೆ ಹೇಳಿತ್ತು. ಆದರೆ, ಗುಜರಾತ್‌ ಸರ್ಕಾರದ ಪರ ವಾದ ಮಂಡಿಸಿದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು, ‘ಪ್ರತಿಕ್ರಿಯೆ ಸಿದ್ಧವಿದೆ. ಕೆಲವು ತಿದ್ದುಪಡಿ ಮಾಡಬೇಕಾಗಿರುವುದರಿಂದ ಪ್ರತಿಕ್ರಿಯೆ ಸಲ್ಲಿಸಲು ಸಮಯಾವಕಾಶ ಬೇಕು’ ಎಂದು ಮನವಿ ಮಾಡಿದರು.

ಪ್ರತಿಕ್ರಿಯೆಯನ್ನು ಆಗಸ್ಟ್ 27ರ ಒಳಗೆ ಸಲ್ಲಿಸಬೇಕು.ಇನ್ನಷ್ಟು ತಿದ್ದುಪಡಿಗಳಿದ್ದರೆ ಸೋಮವಾರ (ಆಗಸ್ಟ್‌ 29) ಸಲ್ಲಿಸಬಹುದು ಎಂದು ನ್ಯಾಯಮೂರ್ತಿಗಳಾದ ಯು.ಯು. ಲಲಿತ್‌, ಎಸ್‌.ಆರ್‌. ಭಟ್‌ ಮತ್ತು ಸುಧಾಂಶು ಧೂಲಿಯಾ ಅವರಿದ್ದ ಪೀಠವು ಮೆಹ್ತಾ ಅವರಿಗೆ ಹೇಳಿತು.

ADVERTISEMENT

‘ಪ್ರಕರಣದ ಕುರಿತು ಇನ್ನಷ್ಟು ಕಾನೂನಾತ್ಮಕ ಸಾಧ್ಯತೆಗಳನ್ನು ಪರಿಶೀಲಿಸಬೇಕಿದೆ. ಆದ್ದರಿಂದ ಸಮಯ ಬೇಕಾಗಿದೆ’ ಎಂದು ತುಷಾರ್‌ ಮೆಹ್ತಾ ಅವರು ವಾದಿಸಿದರು. ಅದಕ್ಕೆ ಪ್ರತಿಯಾಗಿ ‘ತೀಸ್ತಾ ಅವರು ಇನ್ನೂ ಹೆಚ್ಚುಕಾಲ ಜೈಲುವಾಸ ಅನುಭವಿಸುವುದು ತಪ್ಪಾಗುತ್ತದೆ’ ಎಂದು ತೀಸ್ತಾ ಅವರ ಪರ ವಕೀಲ ಕಪಿಲ್‌ ಸಿಬಲ್‌ ವಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.