ADVERTISEMENT

'ಡಿಜಿಟಲ್‌' ಮೂಲಕ ಜೈಲುಗಳಿಗೆ ಜಾಮೀನು ಆದೇಶ: ಸುಪ್ರೀಂ ಕೋರ್ಟ್‌

ಪಿಟಿಐ
Published 16 ಜುಲೈ 2021, 7:59 IST
Last Updated 16 ಜುಲೈ 2021, 7:59 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ತನ್ನ ಜಾಮೀನು ಆದೇಶಗಳನ್ನು ಡಿಜಿಟಲ್ ವ್ಯವಸ್ಥೆಯ ಮೂಲಕ ಸುರಕ್ಷಿತವಾಗಿ ಜೈಲುಗಳಿಗೆ ತಲುಪಿಸುವ ವ್ಯವಸ್ಥೆಯನ್ನು ಶೀಘ್ರವೇ ದೇಶದಾದ್ಯಂತ ಜಾರಿಗೆ ತರಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್‌ ಶುಕ್ರವಾರ ತಿಳಿಸಿದೆ.

ಇದರಿಂದ ಕೈದಿಗಳ ಬಿಡುಗಡೆಗೊಳಿಸಲು ಅಧಿಕಾರಿಗಳು ಅಧಿಕೃತ ಆದೇಶಕ್ಕಾಗಿ ಕಾಯುವುದನ್ನು ತಪ್ಪಿಸಲು ಸಾಧ್ಯವಾಗುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ನ್ಯಾಯಪೀಠವು ಈ ಯೋಜನೆಯ ಕುರಿತು ಪ್ರಸ್ತಾವನೆ ಸಲ್ಲಿಸುವಂತೆ ಸುಪ್ರೀಂ ಕೋರ್ಟ್‌ನ ಪ್ರಧಾನ ಕಾರ್ಯದರ್ಶಿಗೆ ನಿರ್ದೇಶನ ನೀಡಿದೆ. |ಈ ಯೋಜನೆಯನ್ನು ಒಂದು ತಿಂಗಳೊಳಗೆ ಜಾರಿಗೊಳಿಸಬಹುದು’ ಎಂದು ಹೇಳಿದೆ.

ADVERTISEMENT

ಅಂತರ್ಜಾಲ ವ್ಯವಸ್ಥೆ ಇಲ್ಲದೇ ಜಾಮೀನು ಆದೇಶಗಳನ್ನು ಡಿಜಿಟಲ್‌ ವ್ಯವಸ್ಥೆ ಮೂಲಕ ಜೈಲುಗಳಿಗೆ ತಲುಪಿಸಲು ಸಾಧ್ಯವಿಲ್ಲದ ಕಾರಣ, ರಾಜ್ಯ ಸರ್ಕಾರಗಳು, ತಮ್ಮ ವ್ಯಾಪ್ತಿಯ ಜೈಲುಗಳಲ್ಲಿ ಅಂತರ್ಜಾಲ ಸಂಪರ್ಕದ ಲಭ್ಯತೆ ಕುರಿತು ಪ್ರತಿಕ್ರಿಯೆ ನೀಡುವಂತೆ ನ್ಯಾಯಾಲಯ ಕೇಳಿದೆ.

ಈ ಯೋಜನೆ ಅನುಷ್ಠಾನಗೊಳಿಸಲು ನೆರವಾಗುವುದಕ್ಕಾಗಿ ನ್ಯಾಯಪೀಠ, ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ದುಷ್ಯಂತ್ ದವೆ ಅವರನ್ನು ಅಮಿಕಸ್‌ ಕ್ಯೂರಿಯಾಗಿ ನೇಮಕ ಮಾಡಿದೆ.

ಜುಲೈ 8ರಂದು ಸುಪ್ರೀಂ ಕೋರ್ಟ್‌ನಿಂದ ಜಾಮೀನು ಪಡೆದ 13 ಕೈದಿಗಳನ್ನು ಬಿಡುಗಡೆ ಮಾಡಲು ಉತ್ತರ ಪ್ರದೇಶದ ಅಧಿಕಾರಿಗಳು ವಿಳಂಬ ಮಾಡಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಪೀಠ, ಸ್ವಯಂ ಪ್ರೇರಿತವಾಗಿ ಈ ಹೊಸ ಯೋಜನೆ ರೂಪಿಸಲು ಮುಂದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.