ADVERTISEMENT

ವಾರಾಣಸಿಯ ಜ್ಞಾನವಾಪಿ ಮಸೀದಿಯ ವೈಜ್ಞಾನಿಕ ಸಮೀಕ್ಷೆ ಆರಂಭ: ಭಾರಿ ಭದ್ರತೆ

ಬೆಳಿಗ್ಗೆ 7ಕ್ಕೆ ಸಮೀಕ್ಷೆ ಆರಂಭಿಸಿದ ಭಾರತೀಯ ಪುರಾತತ್ವ ಇಲಾಖೆಯ 40 ಅಧಿಕಾರಿಗಳು

ಪಿಟಿಐ
Published 24 ಜುಲೈ 2023, 3:29 IST
Last Updated 24 ಜುಲೈ 2023, 3:29 IST
ಜ್ಞಾನವಾಪಿ ಮಸೀದಿ ಸಂಕೀರ್ಣ (ಪಿಟಿಐ ಚಿತ್ರ)
ಜ್ಞಾನವಾಪಿ ಮಸೀದಿ ಸಂಕೀರ್ಣ (ಪಿಟಿಐ ಚಿತ್ರ)   

ವಾರಾಣಸಿ: ಉತ್ತರ ಪ್ರದೇಶದ ಕಾಶಿ ವಿಶ್ವನಾಥ ದೇಗುಲದ ಪಕ್ಕದಲ್ಲಿರುವ ಜ್ಞಾನವಾಪಿ ಮಸೀದಿಯು, ದೇವಾಲಯದ ಮೇಲೆ ನಿರ್ಮಾಣವಾಗಿದೆಯೇ ಎಂಬುದರ ನಿರ್ಣಯಕ್ಕಾಗಿ ವೈಜ್ಞಾನಿಕ ಸಮೀಕ್ಷೆ ಸೋಮವಾರ ಬೆಳಿಗ್ಗೆ ಆರಂಭವಾಗಿದೆ.

ಭಾರತೀಯ ಪುರಾತತ್ವ ಇಲಾಖೆಯ 40 ಅಧಿಕಾರಿಗಳು (ASI– Archaeological Survey of India) ಬೆಳಿಗ್ಗೆ 7 ರಿಂದ ಸಮೀಕ್ಷೆ ಆರಂಭಿಸಿದ್ದಾರೆ.

ಸಮೀಕ್ಷೆ ಹಿನ್ನೆಲೆಯಲ್ಲಿ ಮಸೀದಿಗೆ ಹಾಗೂ ಮಸೀದಿ ಸುತ್ತಮುತ್ತ ಭಾರಿ ಭದ್ರತೆಯನ್ನು ಒದಗಿಸಲಾಗಿದೆ. ಸ್ಥಳದಲ್ಲಿ ಪ್ರಕರಣದ ಅರ್ಜಿದಾರರೆಲ್ಲರ ವಕೀಲರು ಹಾಜರಿದ್ದಾರೆ. ಹಿಂದೂಗಳ ಪರ ವಕೀಲ ಮದನ್‌ ಮೋಹನ್‌ ಯಾದವ್‌ ವಾದ ಮಂಡಿಸುತ್ತಿದ್ದಾರೆ.

ADVERTISEMENT

ಇದು ಐತಿಹಾಸಿಕ ದಿನ. ವಿಜ್ಞಾನವು ನಮ್ಮ ನಂಬಿಕೆಯನ್ನು ಒಗ್ಗೂಡಿಸುತ್ತದೆ ಎಂದು ಹಿಂದೂಗಳ ಪರವಾಗಿ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿರುವ ಹಾಗೂ ಸಮೀಕ್ಷೆ ನಡೆಯುವ ಸ್ಥಳದಲ್ಲಿದ್ದ ಸೀತಾ ಸಾಹು ಪಿಟಿಐಗೆ ತಿಳಿಸಿದ್ದಾರೆ.

ಮಸೀದಿಯ ವಿವರವಾದ ವೈಜ್ಞಾನಿಕ ಸಮೀಕ್ಷೆ ನಡೆಸುವಂತೆ ವಾರಾಣಸಿಯ ಜಿಲ್ಲಾ ನ್ಯಾಯಾಲಯ ಶುಕ್ರವಾರ‌ ಪುರಾತತ್ವ ಇಲಾಖೆಗೆ ಸೂಚನೆ ನೀಡಿತ್ತು. ಅಗತ್ಯ ಎದುರಾದರೆ ಉತ್ಖನನ ನಡೆಸುವಂತೆಯೂ ತಿಳಿಸಿತ್ತು.  

ವಿಡಿಯೊ, ಫೊಟೊಗಳ ಸಹಿತ ವಿವರವಾದ ವರದಿಯನ್ನು ಆ‌ಗಸ್ಟ್‌ 4ರ ಒಳಗಾಗಿ ಸಲ್ಲಿಸುವಂತೆ ನ್ಯಾಯಾಲಯವು ಪುರಾತತ್ವ ಇಲಾಖೆಗೆ ತಿಳಿಸಿದೆ. 

ಮಸೀದಿಯ ‘ವಝುಖಾನಾ’ದಲ್ಲಿ ‘ಶಿವಲಿಂಗ’ದಂಥ ರಚನೆ ಇದೆ ಎಂದು ಹೇಳಲಾಗಿದ್ದು, ಆ ಸ್ಥಳದ ಸಂರಕ್ಷಣೆಗೆ ಸುಪ್ರೀಂಕೋರ್ಟ್ ಈಗಾಗಲೇ ‌ಆದೇಶಿಸಿದೆ. ಹೀಗಾಗಿ ನಿರ್ದಿಷ್ಟ ಜಾಗದಲ್ಲಿ ಸಮೀಕ್ಷೆ ನಡೆಯುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.