ADVERTISEMENT

ಸ್ಕೂಟಿ ಮೌಲ್ಯಕ್ಕಿಂತ ದಂಡವೇ ಹೆಚ್ಚು!

ದ್ವಿಚಕ್ರ ವಾಹನ ಸವಾರನ ಅಳಲು

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2019, 19:44 IST
Last Updated 3 ಸೆಪ್ಟೆಂಬರ್ 2019, 19:44 IST
ಸ
   

ನವದೆಹಲಿ: ಮೋಟಾರು ವಾಹನ ಕಾಯ್ದೆಗೆ ತಂದಿರುವ ತಿದ್ದುಪಡಿ ಸೆಪ್ಟೆಂಬರ್‌ 1ರಿಂದ ಜಾರಿಯಾದ ಬಳಿಕ ದಾಖಲೆಗಳಿಲ್ಲದೆಯೇ ದ್ವಿಚಕ್ರ ವಾಹನ ಚಲಾಯಿಸಿದ್ದಕ್ಕೆ ದೆಹಲಿಯ ವ್ಯಕ್ತಿಯೊಬ್ಬರಿಗೆ ₹23 ಸಾವಿರ ದಂಡ ವಿಧಿಸಲಾಗಿದೆ.

ಹೆಲ್ಮೆಟ್‌ ಇಲ್ಲದೆಯೇ ವಾಹನ ಚಲಾಯಿಸಿದ್ದು ಹಾಗೂ ಚಾಲನಾ ಪರವಾನಗಿ, ವಿಮೆ, ನೋಂದಣಿ ಪ್ರಮಾಣ ಪತ್ರ ಮತ್ತು ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿದ ಪ್ರಮಾಣ ಪತ್ರ ಹೊಂದಿಲ್ಲದ ಕಾರಣಕ್ಕೆ ದಿನೇಶ್‌ ಮದನ್‌ ಎನ್ನುವವರಿಗೆ ಗುರುಗ್ರಾಮ ಪೊಲೀಸರು ಭಾರಿ ಮೊತ್ತದ ದಂಡ ವಿಧಿಸಿದ್ದಾರೆ.

ಚಾಲನಾ ಪರವಾನಗಿ ಮತ್ತು ವಾಹನ ನೊಂದಣಿ ಪ್ರಮಾಣಪತ್ರ ಇಲ್ಲದೆ ವಾಹನ ಚಲಾಯಿಸಿದ್ದಕ್ಕೆ ತಲಾ ₹5ಸಾವಿರ, ಥರ್ಡ್‌ ಪಾರ್ಟಿ ವಿಮೆ ಇಲ್ಲದಿರುವುದಕ್ಕೆ ₹2ಸಾವಿರ, ವಾಯು ಮಾಲಿನ್ಯಕ್ಕಾಗಿ ₹10 ಸಾವಿರ ಮತ್ತು ಹೆಲ್ಮೆಟ್‌ ಧರಿಸದ ಕಾರಣಕ್ಕೆ ₹1 ಸಾವಿರ ದಂಡ ವಿಧಿಸಲಾಗಿದೆ ಎಂದು ಪೊಲೀಸರು ನೀಡಿರುವ ಚಲನ್‌ನಲ್ಲಿ ಉಲ್ಲೇಖಿಸಲಾಗಿದೆ.

ADVERTISEMENT

’ನಾನು ಯಾವುದೇ ಸಂಚಾರ ನಿಯಮಗಳನ್ನು ಉಲ್ಲಂಘಿಸಿಲ್ಲ. ನನಗೆ ವಿಧಿಸಿರುವ ದಂಡವೂ ಅಪಾರವಾಗಿದೆ. ಕೇವಲ 10 ನಿಮಿಷದಲ್ಲಿ ದಾಖಲೆಗಳನ್ನು ಹಾಜರುಪಡಿಸುವಂತೆ ಸೂಚಿಸಿದರು. ಅದು ಅಸಾಧ್ಯವಾಗಿತ್ತು. ಮನೆಯಲ್ಲಿ ದಾಖಲೆಗಳಿದ್ದವು. ಸಮಯಾವಕಾಶ ನೀಡಿದ್ದರೆ ದಾಖಲೆಗಳನ್ನು ಹಾಜರುಪಡಿಸುತ್ತಿದ್ದೆ’ ಎಂದು ಪೂರ್ವ ದೆಹಲಿಯ ಗೀತಾ ಕಾಲೋನಿ ನಿವಾಸಿ ಮದನ್‌ ತಿಳಿಸಿದ್ದಾರೆ.

‘ಹೆಲ್ಮೆಟ್‌ ಧರಿಸದ ಕಾರಣಕ್ಕೆ ಪೊಲೀಸರು ನನ್ನನ್ನು ತಡೆದರು. ಅದಕ್ಕಾಗಿ ₹1ಸಾವಿರ ದಂಡ ವಿಧಿಸಬಹುದಾಗಿತ್ತು. ಈಗ ವಿಧಿಸಿರುವ ದಂಡದ ಮೊತ್ತವು ನನ್ನ ಸ್ಕೂಟಿ ಮೌಲ್ಯಕ್ಕಿಂತಲೂ ಹೆಚ್ಚು. ದಂಡದ ಅರ್ಧದಷ್ಟು ಸಹ ನನ್ನ ಸ್ಕೂಟಿ ಬೆಲೆ ಬಾಳುವುದಿಲ್ಲ’ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.

ವಿವಿಧ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಸೆಪ್ಟೆಂಬರ್‌ 1ರಂದು ₹39 ಸಾವಿರ ಚಾಲಕರಿಗೆ ಗುರುಗ್ರಾಮ ಪೊಲೀಸರು ದಂಡ ವಿಧಿಸಿದ್ದಾರೆ.

ಸದ್ಯಕ್ಕೆ ಹೊಸ ಕಾಯ್ದೆ ಜಾರಿ ಇಲ್ಲ: ನೂತನ ಕಾಯ್ದೆಯನ್ನು ತಕ್ಷಣಕ್ಕೆ ಜಾರಿಗೊಳಿಸುವುದಿಲ್ಲ ಎಂದು ಪಂಜಾಬ್‌ ಮತ್ತು ತೆಲಂಗಾಣ ಸರ್ಕಾರಗಳು ತಿಳಿಸಿವೆ.

ಸಂಬಂಧಿಸಿದ ಎಲ್ಲರ ಜತೆ ಸಮಾಲೋಚನೆ ನಡೆಸಿದ ಬಳಿಕವೇ ನೂತನ ಕಾಯ್ದೆ ಜಾರಿ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.