ADVERTISEMENT

ಎಸ್‌ಸಿ, ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ದೇಶದಾದ್ಯಂತ ಅನ್ವಯ: ಬಾಂಬೆ ಹೈಕೋರ್ಟ್‌

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2023, 14:32 IST
Last Updated 1 ಸೆಪ್ಟೆಂಬರ್ 2023, 14:32 IST
ಬಾಂಬೆ ಹೈಕೋರ್ಟ್‌ 
ಬಾಂಬೆ ಹೈಕೋರ್ಟ್‌    

ಮುಂಬೈ: ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡ ವ್ಯಕ್ತಿ ಮೇಲೆ ದೇಶದ ಯಾವುದೇ ಭಾಗದಲ್ಲಿ ದೌರ್ಜನ್ಯ ನಡೆದರೂ, ಎಸ್‌ಸಿ,ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆ ಅನ್ವಯವಾಗುತ್ತದೆ. ಕಾಯ್ದೆಯಡಿ ರಕ್ಷಣೆ ಪಡೆಯಲು ಆತ ಅರ್ಹ ಎಂದು ಬಾಂಬೆ ಹೈಕೋರ್ಟ್‌ ಶುಕ್ರವಾರ ಹೇಳಿದೆ.

ದೇಶದ ಯಾವುದೇ ಭಾಗದಲ್ಲಿ ಪರಿಶಿಷ್ಟ ವ್ಯಕ್ತಿ ಮೇಲೆ ದೌರ್ಜನ್ಯ ನಡೆದಿರಲಿ, ಕೃತ್ಯ ನಡೆದ ರಾಜ್ಯದಲ್ಲಿ ಆತನನ್ನು ಎಸ್‌ಸಿ ಅಥವಾ ಎಸ್‌ಟಿ ಎಂದು ಪರಿಗಣಿಸದಿದ್ದರೂ ಈ ಕಾಯ್ದೆಯಡಿ ಆ ವ್ಯಕ್ತಿಗೆ ರಕ್ಷಣೆ ನೀಡಬೇಕು ಎಂದೂ ಹೈಕೋರ್ಟ್‌ ಸ್ಪಷ್ಟಪಡಿಸಿದೆ.

ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ ಡೇರೆ, ಭಾರತಿ ಡಾಂಗ್ರೆ ಮತ್ತು ಎನ್‌.ಜೆ.ಜಮಾದಾರ್‌ ಅವರಿದ್ದ ಪೂರ್ಣಪೀಠವು ಈ ತೀರ್ಪು ನೀಡಿದೆ.

ADVERTISEMENT

ವ್ಯಕ್ತಿಯನ್ನು ಪರಿಶಿಷ್ಟ ಎಂಬುದಾಗಿ ಘೋಷಿಸಿರುವ ರಾಜ್ಯಕ್ಕೆ ಮಾತ್ರ ಈ ಕಾಯ್ದೆಯನ್ನು ಸೀಮಿತಗೊಳಿಸಲಾಗದು. ಹೀಗೆ ಮಾಡಿದಲ್ಲಿ, ಈ ಕಾಯ್ದೆಯನ್ನು ಜಾರಿಗೊಳಿಸಿರುವ ಉದ್ದೇಶವೇ ವ್ಯರ್ಥವಾಗಲಿದೆ ಎಂದು ಪೀಠ ಪ್ರತಿಪಾದಿಸಿದೆ.

‘ಎಸ್‌ಸಿ, ಎಸ್‌ಟಿ ಜನರನ್ನು ಅವರ ವಿರುದ್ಧ ನಡೆಯುವ ದೌರ್ಜನ್ಯದಿಂದ ರಕ್ಷಿಸಲು, ಪ್ರಬಲ ಜಾತಿಯವರಿಂದಾಗುವ ಅವಮಾನ, ಕಿರುಕುಳದಿಂದ ತಪ್ಪಿಸುವ ಸಲುವಾಗಿ ಈ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ. ಅವರಿಗೆ ಮೂಲಭೂತ, ಸಾಮಾಜಿಕ–ಆರ್ಥಿಕ ಮತ್ತು ರಾಜಕೀಯ ಹಕ್ಕುಗಳನ್ನು ಖಾತ್ರಿಪಡಿಸುವುದು ಕೂಡ ಈ ಕಾಯ್ದೆಯ ಉದ್ದೇಶವಾಗಿದೆ’ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

‘ನಿರ್ದಿಷ್ಟ ಜಾತಿ ಅಥವಾ ಗುಂಪಿಗೆ ಸೇರಿದ ದಂಪತಿಗೆ ಜನಿಸುವ ವ್ಯಕ್ತಿಗೆ ಸ್ವಯಂಚಾಲಿತವಾಗಿಯೇ ಆ ಜಾತಿ ಅಂಟಿಕೊಳ್ಳುತ್ತದೆ. ಈ ವಿಷಯದಲ್ಲಿ ವ್ಯಕ್ತಿಗೆ ಆಯ್ಕೆ ಇಲ್ಲ. ತನ್ನ ಜಾತಿಯ ಕುಲಕಸಬು ಅಥವಾ ಸಾಮಾಜಿಕ ಸ್ಥಾನಮಾನದಿಂದ ಹೊರಬಂದರೂ, ತಾನು ಸೇರಿದ ಜಾತಿಯ ಹಣೆಪಟ್ಟಿ ಕಳಚಿಕೊಳ್ಳಲು ವ್ಯಕ್ತಿಗೆ ಸಾಧ್ಯವಾಗುವುದಿಲ್ಲ. ಭಾರತದಲ್ಲಿನ ಜಾತಿ ವ್ಯವಸ್ಥೆ ಸಂಕೀರ್ಣ ಹಾಗೂ ವಿಚಿತ್ರ’ ಎಂದೂ ಪೀಠ ಹೇಳಿದೆ.

ಇದಕ್ಕೂ ಮುನ್ನ, ಅರ್ಜಿದಾರರೊಬ್ಬರ ಪರ ಹಾಜರಿದ್ದ ಹಿರಿಯ ವಕೀಲ ಅಭಿನವ್ ಚಂದ್ರಚೂಡ್, ‘ಸಂತ್ರಸ್ತ ವ್ಯಕ್ತಿಯು ತನ್ನ ಮೂಲ ರಾಜ್ಯದಿಂದ ವಲಸೆ ಹೋದ ಸಂದರ್ಭದಲ್ಲಿ, ಆತನ ವಿರುದ್ಧ ನಡೆಯುವ ದೌರ್ಜನ್ಯಕ್ಕೆ ಎಸ್‌ಸಿ,ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆ ಅನ್ವಯಿಸುವುದಿಲ್ಲ’ ಎಂದು ವಾದಿಸಿದ್ದರು.

ಅಡ್ವೊಕೇಟ್‌ ಜನರಲ್ ಬೀರೇಂದ್ರ ಸರಾಫ್‌ ಇದಕ್ಕೆ ಆಕ್ಷೇಪಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.