ADVERTISEMENT

ಕೃಷಿ ಕಾಯ್ದೆ ರದ್ದು: ರೈತರ ಕಾನೂನು ಹೋರಾಟಕ್ಕೆ ಕೊನೆ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2021, 20:23 IST
Last Updated 19 ನವೆಂಬರ್ 2021, 20:23 IST
ದೆಹಲಿ ಗಡಿಭಾಗದಲ್ಲಿ ರೈತರ ಪ್ರತಿಭಟನೆ–ಸಾಂದರ್ಭಿಕ ಚಿತ್ರ
ದೆಹಲಿ ಗಡಿಭಾಗದಲ್ಲಿ ರೈತರ ಪ್ರತಿಭಟನೆ–ಸಾಂದರ್ಭಿಕ ಚಿತ್ರ   

ನವದೆಹಲಿ: ಮೂರು ಕೃಷಿ ಕಾಯ್ದೆಗಳನ್ನು ಹಿಂದಕ್ಕೆ ಪಡೆಯಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸುವುದರೊಂದಿಗೆ, ಈ ಕಾಯ್ದೆಗಳನ್ನು ‍ಪ್ರಶ್ನಿಸಿ ವಕೀಲರು, ರೈತ ಸಂಘಟನೆಗಳು ಹಾಗೂ ಇತರರು ನ್ಯಾಯಾಲಯಗಳಲ್ಲಿ ಸಲ್ಲಿಸಿದ್ದ ಹಲವು ಅರ್ಜಿಗಳು ಅಪ್ರಸ್ತುತ ಆಗುವ ಸಾಧ್ಯತೆ ಇದೆ.

ಸುಪ್ರೀಂ ಕೋರ್ಟ್‌ ಈ ಮೂರು ಕಾಯ್ದೆಗಳ ಅನುಷ್ಠಾನಕ್ಕೆ ಜನವರಿ 12ರಂದು ತಡೆಯಾಜ್ಞೆ ನೀಡಿತ್ತು. ಕೋರ್ಟ್‌ನ ಆ ಕ್ರಮಕ್ಕೆ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಮತ್ತು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ವಿರೋಧ ವ್ಯಕ್ತಪಡಿಸಿರಲಿಲ್ಲ.

ತಡೆಯಾಜ್ಞೆಯನ್ನು ಕೋರ್ಟ್‌ ನೀಡಿದ್ದರೂ, ದೆಹಲಿಯ ಗಡಿಗಳಲ್ಲಿ ನಡೆದಿದ್ದ ರೈತರ ಪ್ರತಿಭಟನೆ ಕೊನೆಗೊಳ್ಳಲಿಲ್ಲ. ಕಾಯ್ದೆಗಳನ್ನು ಹಿಂದಕ್ಕೆ ಪಡೆಯುವವರೆಗೂ ಪ್ರತಿಭಟನೆ ನಿಲ್ಲಿಸಲಾಗದು ಎಂದು ರೈತರು ಪಟ್ಟುಹಿಡಿದರು. ರೈತರ ಆತಂಕಗಳನ್ನು ಆಲಿಸಲು ಸುಪ್ರೀಂ ಕೋರ್ಟ್‌ ಒಂದು ಸಮಿತಿಯನ್ನು ರಚಿಸಿತು.

ADVERTISEMENT

ಆದರೆ, ಕೆಲವು ಸದಸ್ಯರನ್ನು ಈ ಸಮಿತಿಯ ಭಾಗವಾಗಿಸಿದ್ದರ ಬಗ್ಗೆ ರೈತ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು. ಸಮಿತಿಯಲ್ಲಿ ಸ್ಥಾನ ಪಡೆದಿರುವ ಕೆಲವರು ಕಾಯ್ದೆಗಳ ಪರವಾಗಿ ಇದ್ದಾರೆ, ಅವುಗಳ ಪರವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ದೂರಿದ್ದರು. ರೈತ ಸಂಘಟನೆಗಳ ನಡೆಗೆ ಕೋಪ ವ್ಯಕ್ತಪಡಿಸಿದ್ದ ಕೋರ್ಟ್‌, ಸಮಿತಿಯ ಸದಸ್ಯರು ಹೊಂದಿರುವ ಒಳ್ಳೆಯ ಹೆಸರಿಗೆ ಧಕ್ಕೆ ಬರುವ ರೀತಿಯಲ್ಲಿ ಮಾತನಾಡಬಾರದು ಎಂದು ಹೇಳಿತ್ತು.

‘ಕೆಲವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಎಂದಮಾತ್ರಕ್ಕೆ, ಅವರು ಇಂಥವರೇ ಎಂಬ ಹಣೆಪಟ್ಟಿ ಅಂಟಿಸಬಾರದು. ಜನರಿಗೆ ಅವರದ್ದೇ ಆದ ಅಭಿಪ್ರಾಯ ಇರುತ್ತದೆ. ಕೆಲವು ಅತ್ಯುತ್ತಮ ನ್ಯಾಯಮೂರ್ತಿ
ಗಳು ನಿರ್ದಿಷ್ಟ ಅಭಿಪ್ರಾಯ ವ್ಯಕ್ತಪಡಿಸಿದ ನಂತರವೂ ಆ ಅಭಿಪ್ರಾಯಕ್ಕೆ ಭಿನ್ನವಾದ ರೀತಿಯಲ್ಲಿ ತೀರ್ಪು ನೀಡಿದ್ದು ಇದೆ’ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಹೇಳಿದ್ದರು.

ರೈತ ಪ್ರತಿನಿಧಿಗಳು ಹಾಗೂ ಇತರ ಹಲವರ ಜೊತೆ ಮಾತುಕತೆ ನಡೆಸಿದ್ದ ಸಮಿತಿಯು ಮಾರ್ಚ್‌ 19ರಂದು ವರದಿ ಸಲ್ಲಿಸಿದೆ. ಸಮಿತಿಯ ವರದಿಯನ್ನು ಸರ್ಕಾರದ ಜೊತೆ ಹಂಚಿಕೊಂಡು, ಸಮಿತಿಯ ಶಿಫಾರಸುಗಳನ್ನು ಅನುಷ್ಠಾನಕ್ಕೆ ತರಬೇಕು ಎಂದು ಸುಪ್ರೀಂ ಕೋರ್ಟ್ ನೇಮಿಸಿದ್ದ ಸಮಿತಿಯಲ್ಲಿ ಒಬ್ಬರಾದ ಅನಿಲ್ ಘನ್ವತ್ ಅವರು ಸಿಜೆಐಗೆ ಮನವಿ ಮಾಡಿದ್ದರು.

ಈ ನಡುವೆ, ನೊಯಿಡಾದ ಮಹಿಳೆಯೊಬ್ಬರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿ ರಸ್ತೆಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಯಿಂದಾಗಿ ತಮ್ಮ ದೈನಂದಿನ ಪ್ರಯಾಣ ಅವಧಿ ಹೆಚ್ಚಾಗಿದೆ ಎಂದು ದೂರಿದರು. ರೈತರಿಗೆ ಪ್ರತಿಭಟನೆ ನಡೆಸುವ ಹಕ್ಕು ಖಂಡಿತವಾಗಿಯೂ ಇದೆಯಾದರೂ ಅನಿರ್ದಿಷ್ಟ ಅವಧಿಯವರೆಗೆ ರಸ್ತೆಗಳಲ್ಲಿ ಸಂಚಾರಕ್ಕೆ ಅಡ್ಡಿ ಉಂಟುಮಾಡುವಂತಿಲ್ಲ ಎಂದು ಆಗ ಸುಪ್ರೀಂ ಕೋರ್ಟ್‌ ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.