ADVERTISEMENT

ವಿಚಾರಣೆಗೂ ಮುನ್ನ ಆರೋಪಿಯ ಹೇಳಿಕೆಯ ವಿವರಣೆ ಅಪೇಕ್ಷಣೀಯ: ಸುಪ್ರೀಂಕೋರ್ಟ್‌

ಎಸ್‌ಸಿ.ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆ

ಪಿಟಿಐ
Published 19 ಮೇ 2023, 16:22 IST
Last Updated 19 ಮೇ 2023, 16:22 IST
ಸುಪ್ರೀಂಕೋರ್ಟ್‌
ಸುಪ್ರೀಂಕೋರ್ಟ್‌   

ನವದೆಹಲಿ: ಒಬ್ಬ ವ್ಯಕ್ತಿ ವಿರುದ್ಧ ಎಸ್‌ಸಿ,ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ವಿಚಾರಣೆ ನಡೆಸುವುದಕ್ಕೂ ಮೊದಲು ಆ ವ್ಯಕ್ತಿ ಸಾರ್ವಜನಿಕವಾಗಿ ನೀಡಿರುವ ಹೇಳಿಕೆಯ ಸಾರಾಂಶವನ್ನು ಕನಿಷ್ಠಪಕ್ಷ ದೋಷಾರೋಪ ಪಟ್ಟಿಯಲ್ಲಿಯಾದರೂ ಉಲ್ಲೇಖಿಸುವುದು ಅಪೇಕ್ಷಣೀಯ ಎಂದು ಸುಪ್ರೀಂಕೋರ್ಟ್‌ ಶುಕ್ರವಾರ ಹೇಳಿದೆ.

ಆರೋಪಿಯ ಹೇಳಿಕೆಯನ್ನು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖ ಮಾಡುವುದರಿಂದ, ಅಪರಾಧ ಕೃತ್ಯವು ಎಸ್‌ಸಿ,ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಪರಿಗಣಿಸಲು ಯೋಗ್ಯವಾಗಿದೆಯೇ ಎಂಬ ಬಗ್ಗೆ ನಿರ್ಣಯಿಸಲು ನ್ಯಾಯಾಲಯಕ್ಕೆ ಸಾಧ್ಯವಾಗಲಿದೆ ಎಂದು ಹೇಳಿದೆ.

ನ್ಯಾಯಮೂರ್ತಿಗಳಾದ ಎಸ್‌.ಆರ್‌.ಭಟ್ ಹಾಗೂ ದೀಪಂಕರ್‌ ದತ್ತ ಅವರಿದ್ದ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು.

ADVERTISEMENT

ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿದ ವ್ಯಕ್ತಿಯನ್ನು ಸಾರ್ವಜನಿಕವಾಗಿ ಅವಮಾನಿಸಿದ ಅಥವಾ ಆತನಿಗೆ ಬೆದರಿಕೆ ಒಡ್ಡುವ ಉದ್ದೇಶದಿಂದಲೇ ಅವಮಾನಿಸಿದ ಆರೋಪಕ್ಕೆ ಸಂಬಂಧಿಸಿ ವ್ಯಕ್ತಿ ವಿರುದ್ಧ ಎಸ್‌ಸಿ.ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯ ಸೆಕ್ಷನ್ 3(1)(x) ಅಡಿ ದೋಪಾರೋಪ ಪಟ್ಟಿ ಸಲ್ಲಿಸಿದ ಪ್ರಕರಣದ ವಿಚಾರಣೆ ವೇಳೆ ನ್ಯಾಯಪೀಠ ಹೀಗೆ ಹೇಳಿತು.

‘ಸಂತ್ರಸ್ತನು ಎಸ್‌ಸಿ ಅಥವಾ ಎಸ್‌ಟಿ ಸಮುದಾಯಕ್ಕೆ ಸೇರಿರದ ಹೊರತು, ಒಬ್ಬ ವ್ಯಕ್ತಿಯನ್ನು ಗುರಿಯಾಗಿಸಿ ಮಾಡುವ ಅವಮಾನ ಅಥವಾ ಒಡ್ಡುವ ಬೆದರಿಕೆಯು ಎಸ್‌ಸಿ.ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯ ಸೆಕ್ಷನ್ 3(1)(x) ಅಡಿ ಅಪರಾಧವಾಗದು. ಇದು ಕಾಯ್ದೆಯ ಸ್ಪಷ್ಟ ಉದ್ದೇಶವಾಗಿದೆ’ ಎಂದು ಹೇಳಿತು.

‘ಅಪರಾಧ ನಡೆದ ಸ್ಥಳದಲ್ಲಿ ಆರೋಪಿ, ದೂರುದಾರ ಹಾಗೂ ಆತನ ಕುಟುಂಬದ ಇಬ್ಬರು ಸದಸ್ಯರನ್ನು ಬಿಟ್ಟರೆ ಇತರರ ಪೈಕಿ ಯಾರೊಬ್ಬರ ಹೆಸರನ್ನು ಆರೋಪಿಯ ವಿರುದ್ಧ ಸಲ್ಲಿಸಲಾದ ಎಫ್‌ಐಆರ್ ಅಥವಾ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಿಲ್ಲ’ ಎಂದು ಹೇಳಿದ ನ್ಯಾಯಪೀಠ, ಆರೋಪಿ ವಿರುದ್ಧದ ವಿಚಾರಣೆಯನ್ನು ರದ್ದುಗೊಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.