ADVERTISEMENT

ನನ್ನ ವಿರುದ್ಧದ ಆರೋಪಗಳ ಬಗ್ಗೆ ವಿವರಣೆಗೆ ಅವಕಾಶ ಕೊಡಿ: ಸ್ಪೀಕರ್‌ಗೆ ರಾಹುಲ್ ಪತ್ರ

ಪಿಟಿಐ
Published 21 ಮಾರ್ಚ್ 2023, 11:46 IST
Last Updated 21 ಮಾರ್ಚ್ 2023, 11:46 IST
   

ನವದೆಹಲಿ: ಬ್ರಿಟನ್‌ನಲ್ಲಿ ತಾವು ನೀಡಿದ ಹೇಳಿಕೆ ಕುರಿತಂತೆ ಲೋಕಸಭೆಯಲ್ಲಿ ತಮ್ಮ ವಿರುದ್ಧ ಕೇಂದ್ರ ಸಚಿವರು ಮಾಡಿರುವ ಆಧಾರ ರಹಿತ ಮತ್ತು ಅನುಚಿತ ಆರೋಪಗಳ ಬಗ್ಗೆ ಸಂಸತ್ತಿನಲ್ಲಿ ಪ್ರತಿಕ್ರಿಯಿಸುವ ಹಕ್ಕು ನನಗೆ ಇದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಈ ಕುರಿತಂತೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿರುವ ಗಾಂಧಿ, ವೈಯಕ್ತಿಕ ವಿವರಣೆಗೆ ಸಂಬಂಧಿಸಿದ ನಿಯಮ 357 ಅನ್ನು ಪ್ರಸ್ತಾಪಿಸಿದ್ದಾರೆ. ಜೋತಿರಾದಿತ್ಯ ಸಿಂಧ್ಯಾ ಹೇಳಿಕೆ ಬಗ್ಗೆ ವಿವರಣೆ ನೀಡಲು ಈ ಹಿಂದೆ ರವಿಶಂಕರ್ ಪ್ರಸಾದ್ ಈ ಹಕ್ಕನ್ನು ಬಳಸಿದ್ದ ಬಗ್ಗೆ ರಾಹುಲ್ ಪ್ರಸ್ತಾಪಿಸಿದ್ದಾರೆ.

'ನಾನು ಮತ್ತೆ ಅಂತಹ ವಿನಂತಿಯನ್ನು ಮಾಡುತ್ತಿದ್ದೇನೆ. ಸಂಸತ್ತಿನ ಸಂಪ್ರದಾಯಗಳು, ಸಂವಿಧಾನಾತ್ಮಕವಾಗಿ ಅಂತರ್ಗತವಾಗಿರುವ ಸಹಜ ನ್ಯಾಯದ ನಿಯಮಗಳು ಮತ್ತು ಲೋಕಸಭೆಯ ಕಾರ್ಯವಿಧಾನ ಹಾಗೂ ಕಾರ್ಯವಿಧಾನದ ನಿಯಮ 357ರ ಅಡಿಯಲ್ಲಿ ನಾನು ಈ ಅನುಮತಿಯನ್ನು ಕೇಳುತ್ತಿದ್ದೇನೆ’ಎಂದು ಸ್ಪೀಕರ್‌ಗೆ ಬರೆದಿರುವ ಪತ್ರದಲ್ಲಿ ರಾಹುಲ್ ಗಾಂಧಿ ತಿಳಿಸಿದ್ದಾರೆ.

ADVERTISEMENT

‘ಸದನದ ಮುಂದೆ ಯಾವುದೇ ಪ್ರಶ್ನೆ ಇಲ್ಲದಿದ್ದರೂ ಒಬ್ಬ ಸದಸ್ಯರು ಸ್ಪೀಕರ್ ಅವರ ಅನುಮತಿಯೊಂದಿಗೆ ವೈಯಕ್ತಿಕ ವಿವರಣೆಯನ್ನು ನೀಡಬಹುದು, ಆದರೆ ಈ ಸಂದರ್ಭದಲ್ಲಿ ಯಾವುದೇ ಚರ್ಚಾಸ್ಪದ ವಿಷಯವನ್ನು ಮುಂದಕ್ಕೆ ತರಲಾಗುವುದಿಲ್ಲ ಮತ್ತು ಯಾವುದೇ ಚರ್ಚೆಯು ಉದ್ಭವಿಸುವುದಿಲ್ಲ’ ಎಂದು ನಿಯಮ 357 ಅನ್ನು ಉಲ್ಲೇಖಿಸಿ ಅವರು ಹೇಳಿದ್ದಾರೆ.

ಆಡಳಿತ ಪಕ್ಷದ ಸಂಸತ್ ಸದಸ್ಯರು ಸಂಸತ್ತಿನ ಒಳ ಮತ್ತು ಹೊರಗೆ ನನ್ನ ವಿರುದ್ಧ ಕೀಳುಮಟ್ಟದ ಮತ್ತು ಮಾನಹಾನಿಕರ ಹೇಳಿಕೆಗಳನ್ನು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ನಿಯಮ 357ರಡಿ ವೈಯಕ್ತಿಕ ವಿವರಣೆ ನೀಡಲು ಅವಕಾಶ ಕೋರಿ ಮನವಿ ಸಲ್ಲಿಸುತ್ತಿದ್ದೇನೆ. ದಯವಿಟ್ಟು ನನಗೆ ಅನುವು ಮಾಡಿಕೊಡಬೇಕು ಎಂದು ರಾಹುಲ್ ಗಾಂಧಿಯವರು, ಸ್ಪೀಕರ್‌ಗೆ ವಿನಂತಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.