ADVERTISEMENT

ನಿತೀಶ್‌ ನಾಯಕತ್ವ ಭದ್ರಪಡಿಸಿ: ಜೆ.ಪಿ.ನಡ್ಡಾ

ಬಿಹಾರ ವಿಧಾನಸಭಾ ಚುನಾವಣೆ ಅಂಗವಾಗಿ ವಿವಿಧೆಡೆ ರ‍್ಯಾಲಿ

ಪಿಟಿಐ
Published 11 ಅಕ್ಟೋಬರ್ 2020, 14:07 IST
Last Updated 11 ಅಕ್ಟೋಬರ್ 2020, 14:07 IST
ಬಿಹಾರದಲ್ಲಿ ಚುನಾವಣಾ ಪ್ರಚಾರ ಕೈಗೊಂಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಪಟ್ನಾದಲ್ಲಿರುವ ಜಯಪ್ರಕಾಶ್ ನಾರಾಯಣ ಅವರ ಪುತ್ಥಳಿಗೆ ಗೌರವ ಸಲ್ಲಿಸಿದರು –ಪಿಟಿಐ ಚಿತ್ರ
ಬಿಹಾರದಲ್ಲಿ ಚುನಾವಣಾ ಪ್ರಚಾರ ಕೈಗೊಂಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಪಟ್ನಾದಲ್ಲಿರುವ ಜಯಪ್ರಕಾಶ್ ನಾರಾಯಣ ಅವರ ಪುತ್ಥಳಿಗೆ ಗೌರವ ಸಲ್ಲಿಸಿದರು –ಪಿಟಿಐ ಚಿತ್ರ   

ಗಯಾ/ಪಟ್ನಾ: ‘ಕೋವಿಡ್‌–19 ಪಿಡುಗಿನ ನಡುವೆಯೂ ರಾಜ್ಯದ ಅಭಿವೃದ್ಧಿ, ಜನರ ಸುರಕ್ಷತೆಗೆಮುಖ್ಯಮಂತ್ರಿ ನಿತೀಶ್‌ಕುಮಾರ್‌ ನೇತೃತ್ವದ ಸರ್ಕಾರ ಕ್ರಮ ಕೈಗೊಂಡಿದೆ. ಹೀಗಾಗಿ ರಾಜ್ಯದ ಜನತೆ ಅವರ ನಾಯಕತ್ವವನ್ನು ಭದ್ರಪಡಿಸಬೇಕು’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಭಾನುವಾರ ಹೇಳಿದರು.

ಗಯಾದ ಐತಿಹಾಸಿಕ ಗಾಂಧಿ ಮೈದಾನದಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಅವರು, ‘ದೇಶದ ನಾಯಕತ್ವ ಪ್ರಧಾನಿ ನರೇಂದ್ರ ಮೋದಿ ಅವರ ಕೈಯಲ್ಲಿ ಸುರಕ್ಷಿತವಾಗಿದೆ. ಅದೇ ರೀತಿ ಬಿಹಾರದ ನಾಯಕತ್ವ ನಿತೀಶ್‌ಕುಮಾರ್ ಅವರ ಕೈಯಲ್ಲಿ ಭದ್ರವಾಗಿರುವುದು ಮುಖ್ಯ‘ ಎಂದರು.

‘ಕೋವಿಡ್‌–19 ಪಿಡುಗಿನಿಂದ ಜನರು ತತ್ತರಿಸಿದರು. ಆದರೆ, ಅವರು ರಾಜ್ಯದ ಜನರ ಸುರಕ್ಷತೆಗೆ ಒತ್ತು ನೀಡಿದರು. ಇತರ ರಾಜ್ಯಗಳಲ್ಲಿ ಸಿಲುಕಿದ್ದ ಬಿಹಾರದ ಜನರಿಗೂ ಹಣಕಾಸಿನ ನೆರವು ನೀಡಿದರು’ ಎಂದು ನಡ್ಡಾ ಹೇಳಿದರು.

ADVERTISEMENT

‘ರಾಜ್ಯದಲ್ಲಿ ಈ ಮೊದಲು ನಾಲ್ಕು ವೈದ್ಯಕೀಯ ಕಾಲೇಜುಗಳಿದ್ದವು. ಕಳೆದ ಆರು ವರ್ಷಗಳ ಅವಧಿಯಲ್ಲಿ ಬಿಹಾರಕ್ಕೆ 14 ವೈದ್ಯಕೀಯ ಕಾಲೇಜುಗಳನ್ನು ನೀಡಲಾಗಿದ್ದು, ಇನ್ನೂ 11 ಕಾಲೇಜುಗಳಿಗೆ ಮಂಜೂರಾತಿ ನೀಡುವ ಪ್ರಕ್ರಿಯೆ ನಡೆಯುತ್ತಿದೆ’ ಎಂದರು.

ಪಟ್ನಾಕ್ಕೆ ಭೇಟಿ: ರಾಜ್ಯದಲ್ಲಿ ಚುನಾವಣಾ ಪ್ರಚಾರ ಕೈಗೊಂಡಿರುವ ನಡ್ಡಾ, ವಿಶೇಷ ವಿಮಾನದಲ್ಲಿ ಪಟ್ನಾದ ವಿಮಾನ ನಿಲ್ದಾಣದಲ್ಲಿ ಬಂದಿಳಿದರು. ಅವರಿಗೆ ಪಕ್ಷದ ಕಾರ್ಯಕರ್ತರು ಅದ್ಧೂರಿ ಸ್ವಾಗತ ಕೋರಿದರು.

ಇಲ್ಲಿನ ಪ್ರಸಿದ್ಧ ಹನುಮಾನ್‌ ಮಂದಿರಕ್ಕೆ ತೆರಳಿ, ಪೂಜೆ ಸಲ್ಲಿಸಿದರು. ನಂತರ, ಜಯಪ್ರಕಾಶ್‌ ನಾರಾಯಣ ಅವರು ವಾಸವಿದ್ದ ಮನೆ ‘ಕದಮ್‌ಕುಂಆ’ ಕ್ಕೆ ಭೇಟಿ ನೀಡಿದರು. ಜೆಪಿ ಅವರ ಜನ್ಮ ಶತಮಾನೋತ್ಸವ ಹಿನ್ನೆಲೆಯಲ್ಲಿ ಜೆಪಿ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಗೌರವ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.