ADVERTISEMENT

ಉಗ್ರರ ಬಳಿ ಉಕ್ಕಿನ ಗುಂಡು: ಗುಂಡು ನಿರೋಧಕ ಕವಚ ಬಲಪಡಿಸಿದ ಭದ್ರತಾಪಡೆ

ಪಿಟಿಐ
Published 21 ಮಾರ್ಚ್ 2021, 17:01 IST
Last Updated 21 ಮಾರ್ಚ್ 2021, 17:01 IST
   

ಶ್ರೀನಗರ/ನವದೆಹಲಿ: ಉಗ್ರರ ಬಳಿಯಿಂದ ಲೋಹದ ಕವಚ ಭೇದಿಸುವ ಉಕ್ಕಿನ ಗುಂಡುಗಳನ್ನು ಈಚೆಗೆ ವಶಪಡಿಸಿಕೊಂಡ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪಡೆಗಳು ತಮ್ಮ ವಾಹನ ಮತ್ತು ಬಂಕರ್‌ಗಳ ಗುಂಡುನಿರೋಧಕ ಕವಚಗಳನ್ನು ಬಲಪಡಿಸತೊಡಗಿವೆ.

ಶೋಪಿಯಾನ್‌ನಲ್ಲಿ ಈಚೆಗೆ ನಡೆದ ಎನ್‌ಕೌಂಟರ್‌ನಲ್ಲಿ ನಿಷೇಧಿತ ಜೈಷ್‌–ಎ–ಮೊಹಮ್ಮದ್‌ ಭಯೋತ್ಪಾದಕ ಸಂಘಟನೆಯ ಸ್ಥಳೀಯ ಕಮಾಂಡರ್‌ ವಿಲಾಯತ್‌ ಹುಸೈನ್‌ ಮೃತಪಟ್ಟಿದ್ದ. ಈತನ ಬಳಿಯಿಂದ ಯೋಧರು 36 ಉಕ್ಕಿನ ಗುಂಡುಗಳನ್ನು ವಶಪಡಿಸಿಕೊಂಡಿದ್ದರು.

ಈ ಗುಂಡುಗಳು ಸಾಮಾನ್ಯ ಗುಂಡುನಿರೋಧಕ ಜಾಕೆಟ್‌ಗಳನ್ನು ಭೇದಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಈ ಕಾರಣಕ್ಕೆ ದಕ್ಷಿಣ ಕಾಶ್ಮೀರದಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆಗೆ ನಿಯೋಜಿಸುವ ಯೋಧರು ಬಳಸುವ ಗುಂಡುನಿರೋಧಕ ಜಾಕೆಟ್‌ಗಳು ಮತ್ತು ವಾಹನಗಳಿಗೆ ಹೆಚ್ಚುವರಿ ಪದರವನ್ನು ಹೊಂದಿರುವ ಗುಂಡುನಿರೋಧಕ ಕವಚವನ್ನು ಅಳವಡಿಸಲಾಗಿದೆ ಎಂದೂ ತಿಳಿಸಿದ್ದಾರೆ.

ಎ.ಕೆ. ಶ್ರೇಣಿಯ ರೈಫಲ್‌ಗಳಲ್ಲಿ ಬಳಸುವ ಮದ್ದುಗುಂಡುಗಳನ್ನು ಚೀನಾದ ತಂತ್ರಜ್ಞಾನ ಬಳಸಿ ಉಗ್ರರು ಉಕ್ಕಿನ ಗುಂಡುಗಳಾಗಿ ಮಾರ್ಪಡಿಸುತ್ತಿದ್ದಾರೆ. ಈ ಗುಂಡುಗಳನ್ನು ಉಕ್ಕು ಅಥವಾ ಟಂಗ್‌ಸ್ಟನ್‌ ಕಾರ್ಬೈಡ್‌ನಿಂದ ನಿರ್ಮಿಸಲಾಗುತ್ತಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.