ಇಂಫಾಲ್: ಸರ್ಕಾರಿ ಬಸ್‌ನಿಂದ ರಾಜ್ಯದ ಹೆಸರು ತೆಗೆದುಹಾಕಿರುವುದನ್ನು ವಿರೋಧಿಸಿ ವಿದ್ಯಾರ್ಥಿಗಳು ಮತ್ತು ಮಹಿಳೆಯರು ಆಯೋಜಿಸಿದ್ದ ರ‍್ಯಾಲಿಯನ್ನು, ರಾಜ್ಯಪಾಲರು ಮಣಿಪುರಕ್ಕೆ ಆಗಮಿಸಿದ ಕಾರಣ ಭದ್ರತಾ ಸಿಬ್ಬಂದಿ ತಡೆದರು. ಈ ವೇಳೆ ಅಶ್ರುವಾಯು ಪ್ರಯೋಗವು ನಡೆಯಿತು.
ಕ್ವಾಕೆಇತೆಲ್‌ನಲ್ಲಿ ಜಮಾಯಿಸಿದ್ದ ಪ್ರತಿಭಟನಕಾರರು ರಾಜಭವನದವರೆಗೆ 3 ಕಿ.ಮೀ. ರ‍್ಯಾಲಿ ನಡೆಸಲು ನಿರ್ಧರಿಸಿದ್ದರು. ಆದರೆ, ಅವರು ಅಲ್ಲಿಂದ ಮುಂದುವರಿಯದಂತೆ ತಡೆಯಲಾಯಿತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
‘ವಿದ್ಯಾರ್ಥಿಗಳು ಮತ್ತು ಮಹಿಳೆಯರ ಗುಂಪು ರಾಜಭವನದಿಂದ 200 ಮೀಟರ್ ದೂರದಲ್ಲಿರುವ ಇಂಫಾಲ್ ವಿಮಾನನಿಲ್ದಾಣದಿಂದ ಕೈಸಂಪತ್‌ವರೆಗೆ 6 ಕಿ.ಮೀ ಉದ್ದದ ಮಾನವ ಸರಪಳಿಯನ್ನು ರಚಿಸಿದ್ದರು ಎಂದು ತಿಳಿಸಿದ್ದಾರೆ.
ಮಣಿಪುರದ ಗುರುತನ್ನು ಅಳಿಸಬಾರದು ಮತ್ತು ರಾಜ್ಯಪಾಲರು ಜನರ ಬಳಿ ಕ್ಷಮೆಯಾಚಿಸಬೇಕೆಂದು ಬರೆದಿರುವ ಭಿತ್ತಿಫಲಕಗಳನ್ನು ಪ್ರತಿಭಟನಕಾರರು ಪ್ರದರ್ಶಿಸಿದರು.
ಕ್ವಾಕೆಇತೆಲ್‌ನಲ್ಲಿ ಪ್ರತಿಭಟನಕಾರರು ರಾಜ್ಯಪಾಲರ ಪ್ರತಿಕೃತಿಯನ್ನು ದಹಿಸಲು ಯತ್ನಿಸಿದರು. ಈ ವೇಳೆ ಭದ್ರತಾ ಸಿಬ್ಬಂದಿ ಮತ್ತು ಪ್ರತಿಭಟನಾಕಾರರ ನಡುವೆ ಘರ್ಷಣೆ ನಡೆಯಿತು.
ಮಣಿಪುರ ರಾಜ್ಯಪಾಲ ಅಜಯ್‌ಕುಮಾರ್ ಭಲ್ಲಾ ಅವರು ಸೋಮವಾರ ದೆಹಲಿಯಿಂದ ಮಣಿಪುರಕ್ಕೆ ಆಗಮಿಸಿದರು. ರಾಜ್ಯದಲ್ಲಿ ಪ್ರತಿಭಟನೆ ನಡೆಯುತ್ತಿರುವುದರಿಂದ ಅವರನ್ನು ವಿಮಾನ ನಿಲ್ದಾಣದಿಂದ ರಾಜಭವನಕ್ಕೆ ಹೆಲಿಕಾಪ್ಟರ್ ಮೂಲಕ ಕರೆತರಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.