ADVERTISEMENT

ಪಾಕ್ ಕೈದಿ ಹತ್ಯೆ; ಅಧಿಕಾರಿಗಳ ಎತ್ತಂಗಡಿ, ಜೈಲುಗಳಲ್ಲಿ ಭದ್ರತೆ ಹೆಚ್ಚಳ

ಏಜೆನ್ಸೀಸ್
Published 22 ಫೆಬ್ರುವರಿ 2019, 12:41 IST
Last Updated 22 ಫೆಬ್ರುವರಿ 2019, 12:41 IST
   

ಜೈಪುರ: ಜೈಪುರ ಜೈಲಿನಲ್ಲಿದ್ದ ಪಾಕಿಸ್ತಾನಿ ಕೈದಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರಾಗೃಹ ಅಧೀಕ್ಷಕ ಸಂಜಯ್ ಯಾದವ್ ಮತ್ತು ಉಪ ಅಧೀಕ್ಷಕ ಜಗದೀಶ್ ಶರ್ಮಾ ಅವರನ್ನು ಹುದ್ದೆ ತೋರಿಸದೆ ಎತ್ತಂಗಡಿ ಮಾಡಲಾಗಿದೆ. ಈ ನಡುವೆ, ಪಾಕಿಸ್ತಾನಿ ಕೈದಿಗಳಿರುವ ಜೈಲುಗಳಲ್ಲಿ ಭದ್ರತೆಯನ್ನೂ ಹೆಚ್ಚಿಸಲಾಗಿದೆ.

ಟಿ.ವಿ ನೋಡುವ ಸಂದರ್ಭದಲ್ಲಿ ಚಾನೆಲ್ ಆಯ್ಕೆಗೆ ಸಂಬಂಧಿಸಿದಂತೆ ಕೈದಿಗಳ ನಡುವೆ ಬುಧವಾರ ನಡೆದಿತ್ತು. 50 ವರ್ಷ ವಯಸ್ಸಿನ ಶಖ್ರುಲ್ಲಾ ಎಂಬಾತನನ್ನು ಸಹ ಕೈದಿಗಳು ಹತ್ಯೆ ಮಾಡಿದ್ದರು.

ಸ್ಥಳೀಯ ಯುವಕರನ್ನು ತೀವ್ರಗಾಮಿಗಳಾಗಿ ಪರಿವರ್ತಿಸುವ ಘಟಕ ನಡೆಸುತ್ತಿದ್ದ ಆರೋಪದಲ್ಲಿ ಪಾಕಿಸ್ತಾನದ ಶಖ್ರುಲ್ಲಾನನ್ನು ಬಂಧಿಸಲಾಗಿತ್ತು. 2011ರಿಂದ ಈತ ಇದೇ ಜೈಲಿನಲ್ಲೇ ಇದ್ದ. 2017ರಲ್ಲಿ ಈತನಿಗೆ ಜೀವಾವಧಿ ಶಿಕ್ಷೆಯಾಗಿತ್ತು.

ADVERTISEMENT

ಘಟನೆಗೆ ಸಂಬಂಧಿಸಿದಂತೆ ಮುಖ್ಯ ಮೇಲ್ವಿಚಾರಕ ಭೈಯಾಂತ್ ಶರ್ಮಾ ಮತ್ತು 10ನೇ ವಾರ್ಡ್‌ನ ಮೇಲ್ವಿಚಾರಕ ರಾಮಸ್ವರೂಪ್ ಎಂಬುವರನ್ನು ಅಮಾನತುಗೊಳಿಸಲಾಗಿದೆ. ಹತ್ಯೆ ಆರೋಪದಲ್ಲಿ ನಾಲ್ವರು ಸಹಕೈದಿಗಳ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಮರಣೋತ್ತರ ಪರೀಕ್ಷೆ ಬಳಿಕವೂ ಮೃತದೇಹವನ್ನು ಆಸ್ಪತ್ರೆಯಲ್ಲೇ ಇರಿಸಲಾಗಿದೆ. ಪಾಕಿಸ್ತಾನ ಹೈಕಮಿಷನ್‌ನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಸರ್ಕಾರದ ನಿರ್ದೇಶನಕ್ಕಾಗಿ ಕಾಯಲಾಗುತ್ತಿದ್ದು, ಅನುಮತಿ ನೀಡಿದರೆ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೀವ್ ಸ್ವರೂಪ್ ತಿಳಿಸಿದ್ದಾರೆ.

ಸದ್ಯ ಪಾಕಿಸ್ತಾನದ 16 ಕೈದಿಗಳು ರಾಜ್ಯದ ವಿವಿಧ ಜೈಲಿನಲ್ಲಿದ್ದು, ಜೈಪುರ ಮತ್ತು ಬಿಕಾನೆರ್ ಜೈಲಿನಲ್ಲೇ ತಲಾ ಐದು ಮಂದಿ ಇದ್ದಾರೆ. ಈ ಕೈದಿಗಳನ್ನು ಪ್ರತ್ಯೇಕ ಬ್ಯಾರಕ್‌ಗಳಲ್ಲಿ ಇರಿಸಿ ಹೆಚ್ಚಿನ ಭದ್ರತೆ ಒದಗಿಸಲಾಗಿದೆ ಎಂದು ಕಾರಾಗೃಹಗಳ ಮಹಾ ನಿರ್ದೇಶಕ ಎನ್‌.ಆರ್.ಕೆ. ರೆಡ್ಡಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.