ADVERTISEMENT

ದೆಹಲಿ ಮುಖ್ಯಮಂತ್ರಿ ಆಯ್ಕೆ ಮುಂದುವರಿದ ಕಸರತ್ತು

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2025, 15:48 IST
Last Updated 11 ಫೆಬ್ರುವರಿ 2025, 15:48 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೆಹಲಿ ಮುಖ್ಯಮಂತ್ರಿ ಆಯ್ಕೆಗಾಗಿ ಬಿಜೆಪಿಯಲ್ಲಿ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಮುಂಬರುವ ಬಿಹಾರ ವಿಧಾನಸಭೆ ಮತ್ತು ಪಂಜಾಬ್‌ನಲ್ಲಿ ಬಲಿಷ್ಠವಾಗಿರುವ ಎಎಪಿಗೆ ರಾಜಕೀಯ ಸಂದೇಶ ರವಾನಿಸುವ ನಿಟ್ಟಿನಲ್ಲಿ ಬಿಜೆಪಿಯು ಇಬ್ಬರು ಉಪ ಮುಖ್ಯಮಂತ್ರಿಗಳನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. 

ದೆಹಲಿ ವಿಧಾನಸಭೆ ನೂತನವಾಗಿ ಆಯ್ಕೆಯಾದ ಕೆಲವು ಬಿಜೆಪಿ ಶಾಸಕರು ಮಂಗಳವಾರ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು. ಆದಾಗ್ಯೂ, ಅಮೆರಿಕ ಮತ್ತು ಫ್ರಾನ್ಸ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮರಳಿದ ಬಳಿಕವೇ ನೂತನ ಸಚಿವ ಸಂಪುಟದ ಕುರಿತು ಅಂತಿಮ ನಿರ್ಣಯ ಕೈಗೊಳ್ಳಲಾಗುವುದು ಎಂದು ತಿಳಿದುಬಂದಿದೆ. 

ಸಿಖ್ ಸಮುದಾಯಕ್ಕೆ ಸಂಪುಟದಲ್ಲಿ ಪ್ರಾತಿನಿಧ್ಯ ಕಲ್ಪಿಸಲು ರಜೌರಿ ಗಾರ್ಡನ್ ಕ್ಷೇತ್ರದ ಶಾಸಕ ಮನಜಿಂದರ್ ಸಿಂಗ್ ಸಿರ್ಸಾ ಅವರಿಗೆ ಸಚಿವ ಸ್ಥಾನ ಅಥವಾ ಉಪ ಮುಖ್ಯಮಂತ್ರಿ ಸ್ಥಾನ ನೀಡುವ ಇರಾದೆ ಬಿಜೆಪಿಗೆ ಇದೆ. ಬಿಹಾರದಲ್ಲಿ ಬಿಜೆಪಿಯು ಜೆಡಿಯು ಪಕ್ಷದ ಜೂನಿಯರ್ ಪಕ್ಷವಾಗಿ ಅಧಿಕಾರ ಹಂಚಿಕೊಳ್ಳುತ್ತಿದೆ. ಏಕಾಂಗಿಯಾಗಿ ಅಧಿಕಾರದ ಗದ್ದುಗೆಗೇರಲು ಬಿಜೆಪಿಯಿಂದ ಸಾಧ್ಯವಾಗಿಲ್ಲ. ಹೀಗಾಗಿ, 2025ರ ಡಿಸೆಂಬರ್ ವೇಳೆಗೆ ನಡೆಯಲಿರುವ ಬಿಹಾರ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಉಪ ಮುಖ್ಯಮಂತ್ರಿ ಸ್ಥಾನ ಸೃಷ್ಟಿಸುವ ಅಪೇಕ್ಷೆಯನ್ನು ಪಕ್ಷ ಹೊಂದಿದೆ. 

ADVERTISEMENT

ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ವಿರುದ್ಧ ಗೆಲುವು ಸಾಧಿಸಿದ ಮಾಜಿ ಸಂಸದ ಪರ್ವೇಶ್ ವರ್ಮಾ ಅವರು ಮುಖ್ಯಮಂತ್ರಿ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಆದರೆ, 14 ರಾಜ್ಯಗಳಲ್ಲಿ ಬಿಜೆಪಿ ನೇತೃತ್ವದ ಮುಖ್ಯಮಂತ್ರಿಗಳಿದ್ದು, ಯಾರೊಬ್ಬರೂ ಮಹಿಳೆಯರಿಲ್ಲ. ಹೀಗಾಗಿ, ದೆಹಲಿಯಲ್ಲಿ ಮಹಿಳೆಯೊಬ್ಬರನ್ನು ಮುಖ್ಯಮಂತ್ರಿ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.