ನವದೆಹಲಿ: ಇಲ್ಲಿನ ಶ್ರೀ ಶಾರದಾ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯನ್ ಮ್ಯಾನೇಜ್‌ಮೆಂಟ್‌ನ 17 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತಿರುವ, ಸ್ವಯಂಘೋಷಿತ ದೇವಮಾನವ ಚೈತನ್ಯಾನಂದ ಸರಸ್ವತಿ (62) ಅವರನ್ನು ಕ್ಯಾಂಪಸ್‌ಗೆ ಸೋಮವಾರ ಕರೆದೊಯ್ದ ಘಟನೆಯ ಮರುಸೃಷ್ಟಿ ಮಾಡಲಾಯಿತು.
‘ಸರಸ್ವತಿ ಅವರು ಈ ಹಿಂದೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಈ ಸಂಸ್ಥೆಯ ಕಚೇರಿಗೆ ಕರೆದೊಯ್ದು ಕ್ಯಾಂಪಸ್ ಮತ್ತು ಹಾಸ್ಟೆಲ್‌ನಲ್ಲಿ ಅಳವಡಿಸಿದ್ದ ಸಿ.ಸಿ.ಟಿ.ವಿ ಕ್ಯಾಮೆರಾಗಳ ಬಗ್ಗೆ ಮಾಹಿತಿ ಪಡೆಯಲಾಯಿತು. ಹಾಸ್ಟೆಲ್‌ನ ಸ್ನಾನಗೃಹಗಳ ಹೊರಗೆ ಸಿ.ಸಿ.ಟಿ.ವಿ ಕ್ಯಾಮೆರಾಗಳು ಇದ್ದವು. ಅದರ ದೃಶ್ಯಾವಳಿಗಳು ಅವರಿಂದ ವಶಪಡಿಸಿಕೊಂಡ ಮೊಬೈಲ್ ಫೋನ್‌ಗಳಲ್ಲಿ ಪೈಕಿ ಒಂದರಲ್ಲಿ ಲಭ್ಯವಾಗಿವೆ’ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸಂಸ್ಥೆಯಲ್ಲಿ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡುತ್ತಿರುವ ಮೂವರು ಮಹಿಳಾ ಸಹಾಯಕಿಯರನ್ನು ವಿಚಾರಣೆ ನಡೆಸುವ ಸಾಧ್ಯತೆ ಇದೆ. ಇವರು ವಿದ್ಯಾರ್ಥಿನಿಯರನ್ನು ಬೆದರಿಸಿದ್ದರು. ಅಲ್ಲದೆ, ಸರಸ್ವತಿ ಅವರು ಕಳುಹಿಸಿದ್ದ ಅಶ್ಲೀಲ ಸಂದೇಶಗಳನ್ನು ಅಳಿಸಿಹಾಕುವಂತೆ ವಿದ್ಯಾರ್ಥಿನಿಯರ ಮೇಲೆ ಒತ್ತಡ ಹೇರಿದ್ದರು ಎಂದು ಹೇಳಿದ್ದಾರೆ.
ಜುಲೈನಿಂದ ವಿದೇಶದಲ್ಲಿದ್ದ ಸರಸ್ವತಿ ಅವರು ಆಗಸ್ಟ್ 6ರಂದು ಭಾರತಕ್ಕೆ ಮರಳಿದ್ದರು. ಲೈಂಗಿಕ ಕಿರುಕುಳದ ಆರೋಪ ಕೇಳಿಬಂದ ನಂತರ, ಅವರು ದೇಶವನ್ನು ತೊರೆಯದಂತೆ ತಡೆಯಲು ಲುಕ್ ಔಟ್ ನೋಟಿಸ್ ಹೊರಡಿಸಲಾಗಿತ್ತು. ಅವರು ತಲೆಮರೆಸಿಕೊಂಡಿದ್ದಾಗ ವೃಂದಾವನ, ಮಥುರಾ ಮತ್ತು ಆಗ್ರಾ ನಗರಗಳ ನಡುವೆ ಟ್ಯಾಕ್ಸಿಗಳಲ್ಲಿ ಓಡಾಡುತ್ತಿದ್ದರು. ಸಣ್ಣ ಹೋಟೆಲ್‌ಗಳಲ್ಲಿ ತಂಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.