ADVERTISEMENT

ದೆಹಲಿ ಗಲಭೆ | ಸಂಸತ್‌ನಲ್ಲಿ ಚರ್ಚೆಗೆ ಆಗ್ರಹ; ನಡೆಯದ ಕಲಾಪ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2020, 19:22 IST
Last Updated 3 ಮಾರ್ಚ್ 2020, 19:22 IST
ಲೋಕಸಭೆಯಲ್ಲಿ ವಿರೋಧ ಪಕ್ಷಗಳ ಸದಸ್ಯರು ಪ್ರತಿಭಟನೆ ನಡೆಸಿದರು–ಪಿಟಿಐ ಚಿತ್ರ
ಲೋಕಸಭೆಯಲ್ಲಿ ವಿರೋಧ ಪಕ್ಷಗಳ ಸದಸ್ಯರು ಪ್ರತಿಭಟನೆ ನಡೆಸಿದರು–ಪಿಟಿಐ ಚಿತ್ರ   

ನವದೆಹಲಿ: ಈಶಾನ್ಯ ದೆಹಲಿಯಲ್ಲಿ 46 ಜನರ ಸಾವಿಗೆ ಕಾರಣವಾಗಿರುವ ಹಿಂಸಾಚಾರದ ಕುರಿತು ಸಮಗ್ರ ಚರ್ಚೆಗೆ ಅವಕಾಶ ಕೋರಿ ವಿರೋಧ ಪಕ್ಷಗಳು ತೀವ್ರ ಪ್ರತಿಭಟನೆ ನಡೆಸಿದ್ದರಿಂದ ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಮಂಗಳವಾರವೂ ಕಲಾಪ ನಡೆಯಲಿಲ್ಲ.

ಹಿಂಸಾಚಾರ ನಿಯಂತ್ರಿಸದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ರಾಜೀನಾಮೆಗೆ ಆಗ್ರಹಿಸಿ ವಿರೋಧ ಪಕ್ಷಗಳ ಸದಸ್ಯರು ಪ್ರತಿಭಟನೆ ನಡೆಸಿದ್ದರಿಂದ ಸೋಮವಾರವೂ ಕಲಾಪ ನಡೆದಿರಲಿಲ್ಲ.

ಕಾಂಗ್ರೆಸ್‌, ಟಿಎಂಸಿ, ಎಎಪಿ, ಡಿಎಂಕೆ ಸೇರಿದಂತೆ ಇತರ ವಿರೋಧ ಪಕ್ಷಗಳ ಸದಸ್ಯರು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತ ಸ್ಪೀಕರ್‌ ಪೀಠದ ಎದುರಿನ ಅಂಗಳಕ್ಕೆ ನುಗ್ಗಿ ಪ್ರತಿಭಟಿಸತೊಡಗಿದರು. ಲೋಕಸಭೆಯಲ್ಲಿ ಎರಡು ಬಾರಿಕಲಾಪ ಮುಂದೂಡಿದರೂ ನಿಯಂತ್ರಣಕ್ಕೆ ಬರಲಿಲ್ಲ.

ADVERTISEMENT

ವಿರೋಧ ಪಕ್ಷಗಳು ಹಾಗೂ ಆಡಳಿತ ಪಕ್ಷಗಳ ಸದಸ್ಯರು ಪರಸ್ಪರರ ಆಸನಗಳತ್ತ ತೆರಳಿ ತಳ್ಳಾಟ ನಡೆಸುವುದು ಹಾಗೂ ಘೋಷಣಾ ಫಲಕ ಪ್ರದರ್ಶಿಸಿ ಚರ್ಚೆಗೆ ಅಡ್ಡಿಪಡಿಸುವುದನ್ನು ಸಹಿಸಲಾಗದು. ಶಿಸ್ತು ಪಾಲಿಸದವರನ್ನು ಅಮಾನತು ಮಾಡಲಾಗುವುದು ಎಂದು ಸ್ಪೀಕರ್‌ ಓಂ ಬಿರ್ಲಾ ಎಚ್ಚರಿಸಿದರು.

ಹೋಳಿ ಹಬ್ಬದ ನಂತರ ಮಾರ್ಚ್‌ 11ರಿಂದ ನಿಯಮಾನುಸಾರ ಪೂರ್ಣ ಚರ್ಚೆಗೆ ಅವಕಾಶ ನೀಡಲಾಗುವುದು ಎಂದು ಸ್ಪೀಕರ್‌ ತಿಳಿಸಿದರು. ತೃಪ್ತರಾಗದ ವಿರೋಧಪಕ್ಷಗಳ ಸದಸ್ಯರು ಮತ್ತೆ ಪ್ರತಿಭಟನೆ ಮುಂದುವರಿಸಿದರು.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಬ್ಯಾಂಕಿಂಗ್ ನಿಯಂತ್ರಣ (ತಿದ್ದುಪಡಿ) ಮಸೂದೆ ಮಂಡಿಸಿದ ಸಂದರ್ಭ ಗದ್ದಲ ಹೆಚ್ಚಿತ್ತು. ಆಗ ಮಧ್ಯಾಹ್ನ 2.30ರ ವೇಳೆಗೆ ಬುಧವಾರಕ್ಕೆ ಕಲಾಪ ಮುಂದೂಡಲಾಯಿತು.

ರಾಜ್ಯಸಭೆಯಲ್ಲೂ ಪ್ರತಿಭಟನೆ
ಅಮಿತ್‌ ಶಾ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ಹಿನ್ನೆಲೆಯಲ್ಲಿ ರಾಜ್ಯಸಭೆ ಕಲಾಪವನ್ನೂ ಬುಧವಾರಕ್ಕೆ ಮುಂದೂಡಲಾಯಿತು. ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್‌ ಸಿಂಗ್‌ ಠಾಕೂರ್‌ ಚರ್ಚೆ ವಿವರ ಓದಲಾರಂಭಿಸಿದಾಗ ಪ್ರತಿಭಟನೆ ತೀವ್ರಗೊಂಡಿತು.ಎರಡು ಬಾರಿ ಕಲಾಪ ಮುಂದೂಡಲಾಗಿತ್ತು. ಆದರೆ, ವಿರೋಧ ಪಕ್ಷಗಳ ಸದಸ್ಯರ ಪ್ರತಿಭಟನೆ ನಿಲ್ಲಲಿಲ್ಲ.

ನ್ಯಾಯಾಂಗ ತನಿಖೆಗೆ ಆಗ್ರಹ
ಈಶಾನ್ಯ ದೆಹಲಿಯಲ್ಲಿ ನಡೆದ ಹಿಂಸಾಚಾರ ಪ್ರಕರಣದ ನ್ಯಾಯಾಂಗ ತನಿಖೆಗೆ ಆಗ್ರಹಿಸಿ ಆಮ್ ಆದ್ಮಿ ಪಕ್ಷದ ಸದಸ್ಯರು ಸಂಸತ್‌ನ ಆವರಣದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆ ಎದುರು ಮಂಗಳವಾರವೂ ಧರಣಿ ನಡೆಸಿದರು.

ಹಿಂಸಾಚಾರದ ಪರಿಶೀಲನೆಗಾಗಿ ಜಂಟಿ ಸಂಸದೀಯ ಸಮಿತಿ ರಚಿಸಬೇಕು. ಪ್ರಚೋದನಾತ್ಮಕ ಭಾಷಣ ಮಾಡಿರುವ ರಾಜಕಾರಣಿಗಳನ್ನು ಮಂಪರು ಪರೀಕ್ಷೆಗೆ ಒಳಪಡಿಸಿ, ಆ ಪ್ರಕ್ರಿಯೆಯ ನೇರ ಪ್ರಸಾರಕ್ಕೆ ಸೂಚಿಸಬೇಕು. ಸತ್ಯಾಂಶ ಅರಿಯಲು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಗೆ ಆದೇಶಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.