ADVERTISEMENT

ಅಧಿವೇಶನ ಮೊಟಕು: ಪ್ರಜಾಸತ್ತೆಗೆ ಒಳ್ಳೆಯದಲ್ಲ– ಕಾಂಗ್ರೆಸ್‌

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2021, 19:18 IST
Last Updated 11 ಆಗಸ್ಟ್ 2021, 19:18 IST

ನವದೆಹಲಿ (ಪಿಟಿಐ): ಸಂಸತ್ತಿನ ಮುಂಗಾರು ಅಧಿವೇಶನದ ಅವಧಿಯನ್ನು ಮೊಟಕುಗೊಳಿಸಿರುವುದಕ್ಕಾಗಿ ಸರ್ಕಾರವನ್ನು ಕಾಂಗ್ರೆಸ್‌ ಟೀಕಿಸಿದೆ. ಸಾರ್ವಜನಿಕ ಹಿತಾಸಕ್ತಿಯ ವಿಷಯಗಳ ಬಗ್ಗೆ ದನಿ ಎತ್ತಲು ವಿರೋಧ ಪಕ್ಷಗಳ ಸದಸ್ಯರಿಗೆ ಅವಕಾಶವನ್ನೇ ಕೊಡದಿರುವುದು ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ ಎಂದು ಹೇಳಿದೆ.

‘ಬೆಲೆ ಏರಿಕೆ, ಹೆಚ್ಚುತ್ತಿರುವ ಇಂಧನ ದರ, ಕೃಷಿ ಕಾಯ್ದೆ ವಿರೋಧಿಸಿ ನಡೆಸುತ್ತಿರುವ ರೈತರ ಹೋರಾಟದಂಥ ವಿಷಯಗಳ ಬಗ್ಗೆ ಮಾತನಾಡಲುಅಧಿವೇಶನ ಆರಂಭವಾದ ದಿನದಿಂದಲೂ ವಿರೋಧ ಪಕ್ಷಗಳ ಸದಸ್ಯರು ಸಜ್ಜಾಗಿದ್ದರು. ಆದರೆ, ಸರ್ಕಾರ ಅವಕಾಶ ಕೊಡಲಿಲ್ಲ. ಯಾರು ಸರಿ–ಯಾರು ತಪ್ಪು? ಅಥವಾ ಯಾವ ಬೇಡಿಕೆ ಸರಿಯಾದುದು, ಯಾವುದು ಅಲ್ಲ ಎಂಬುದನ್ನು ಹೇಳುವುದು ಸರ್ಕಾರದ ಕೆಲಸವಲ್ಲ. ತನ್ನ ಮೂಗಿನ ನೇರಕ್ಕೇ ನಡೆದುಕೊಳ್ಳುವಂತಹ ಸರ್ಕಾರ ದೇಶಕ್ಕೆ ಒಳ್ಳೆಯದಲ್ಲ ಹಾಗೂ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿಯಾದುದು’ ಎಂದು ಲೋಕಸಭೆಯಲ್ಲಿ ಕಾಂಗ್ರೆಸ್‌ ಪಕ್ಷದ ನಾಯಕ ಅಧಿರ್‌ ರಂಜನ್‌ ಚೌಧರಿ ಆರೋಪಿಸಿದರು.

‘ಆಗಸ್ಟ್‌ 13ರವರೆಗೆ ಅಧಿವೇಶನ ನಡೆಸುವುದಾಗಿ ತಿಳಿಸಿ, ಇಂದು ಏಕಾಏಕಿಯಾಗಿ ಸದನವನ್ನು ನಡೆಸುವ ಅವಶ್ಯಕತೆ ಇಲ್ಲ ಎಂದರೆ ಹೇಗೆ?’ ಎಂದು ಕಿಡಿಕಾರಿದರು.

ADVERTISEMENT

ಪೆಗಾಸಸ್‌ ವಿಷಯವಾಗಿ ವಿರೋಧ ಪಕ್ಷಗಳ ಸದಸ್ಯರನ್ನು ಆಹ್ವಾನಿಸಿ ಚರ್ಚಿಸುವ ಪ್ರಯತ್ನಕ್ಕೂ ಸರ್ಕಾರ ಮುಂದಾಗಲಿಲ್ಲ. ಮುಂಗಾರು ಅಧಿವೇಶನದ ಈ ಅವಧಿಯಲ್ಲಿ ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಬುಧವಾರವಷ್ಟೇ ಕಾಣಿಸಿಕೊಂಡರು. ಇದರ ಅರ್ಥ, ಅಧಿವೇಶನವು ಅರ್ಥವತ್ತಾಗಿ ನಡೆಯುವುದು ಸರ್ಕಾರಕ್ಕೆ ಬೇಕಿಲ್ಲ. ತನ್ನ ಮನಬಂದಂತೆ ನಡೆಸಿ, ಚರ್ಚೆ ಇಲ್ಲದೇ ಮಸೂದೆಗಳಿಗೆ ಅಂಗೀಕಾರ ಪಡೆಯುವುದಷ್ಟೇ ಅದಕ್ಕೆ ಬೇಕಾಗಿರುವುದು ಎಂದು ಟೀಕಿಸಿದರು.

‘ಜನರ ಕಾಳಜಿಗೆ ಸಂಬಂಧಪಟ್ಟ ವಿಷಯಗಳನ್ನು ಪ್ರಸ್ತಾಪಿಸುವುದು ನಮ್ಮ ಕೆಲಸ. ಸಂಸತ್ತಿನ ಕಲಾಪವು ಸುಗಮವಾಗಿ ನಡೆಯುವಂತೆ ನಿಭಾಯಿಸುವುದು ಏನಿದ್ದರೂ ಸರ್ಕಾರದ ಕೆಲಸ. ನಮ್ಮ ಕರ್ತವ್ಯವನ್ನು ನಾವು ನಿಭಾಯಿಸಿದ್ದೇವೆ’ ಎಂದು ಚೌಧರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.