ADVERTISEMENT

‘ಚರ್ಮಕ್ಕೆ ಚರ್ಮ ತಾಗಿಲ್ಲ’ ತೀರ್ಪು ಕೊಟ್ಟ ನ್ಯಾಯಮೂರ್ತಿಗೆ ಹಿಂಬಡ್ತಿ?

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2021, 21:34 IST
Last Updated 16 ಡಿಸೆಂಬರ್ 2021, 21:34 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಚರ್ಮಕ್ಕೆ ಚರ್ಮ ತಾಗಿದರೆ ಮಾತ್ರ ಲೈಂಗಿಕ ದೌರ್ಜನ್ಯ ಎಂದು ಪರಿಗಣಿಸಲು ಸಾಧ್ಯ ಎಂಬ ತೀರ್ಪು ನೀಡಿದ್ದ ಬಾಂಬೆ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿ ಪುಷ್ಪಾ ಗನೆಡೀವಾಲಾ ಅವರ ಕಾಯಂ ನೇಮಕಕ್ಕೆ ಸುಪ್ರೀಂ ಕೋರ್ಟ್ ಕೊಲಿಜಿಯಂ ನಿರಾಕರಿಸಿದೆ ಎಂದು ತಿಳಿದುಬಂದಿದೆ.

ಹೆಣ್ಣು ಮಗುವಿನ ಮೈ ಸವರಿದ ಆರೋಪಿಗೆ ಪುಷ್ಪಾ ಅವರು ಜಾಮೀನು ಮಂಜೂರು ಮಾಡಿದ್ದರು. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ (ಪೋಕ್ಸೊ) ಕಾಯ್ದೆಯ ಅಡಿಯಲ್ಲಿನ ಪ್ರಕರಣದ ವಿಚಾರಣೆಯನ್ನು ಅವರು ನಡೆಸಿದ್ದರು. ಚರ್ಮಕ್ಕೆ ಚರ್ಮ ತಾಗಿಲ್ಲ. ಹಾಗಾಗಿ, ಈ ಪ್ರಕರಣವನ್ನು ಲೈಂಗಿಕ ದೌರ್ಜನ್ಯ ಎಂದು ಹೇಳಲಾಗದು ಎಂದು ಪುಷ್ಪಾ ತೀರ್ಪು ನೀಡಿದ್ದರು.

ಈ ತೀರ್ಪು ವ್ಯಾಪಕ ಟೀಕೆಗೆ ಒಳಗಾಗಿತ್ತು. ಬಳಿಕ, ಈ ತೀರ್ಪನ್ನು ಸುಪ್ರೀಂ ಕೋರ್ಟ್‌ ರದ್ದುಮಾಡಿತ್ತು.

ADVERTISEMENT

ಬಾಂಬೆ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಗಳಾಗಿದ್ದ ಮಾಧವ್‌ ಜಯಾಜಿರಾವ್‌ ಜಾಮದಾರ್‌, ಅಮಿತ್‌ ಬಾಲಚಂದ್ರ ಬೋರ್ಕರ್‌ ಮತ್ತು ಶ್ರೀಕಾಂತ್‌ರ ದತ್ತಾತ್ರೇಯ ಕುಲಕರ್ಣಿ ಅವರನ್ನು ಕಾಯಂ ನ್ಯಾಯಮೂರ್ತಿಗಳಾಗಿ ನೇಮಿಸಲು ಕೊಲಿಜಿಯಂ ಶಿಫಾರಸು ಮಾಡಿದೆ. ಹೆಚ್ಚುವರಿ ನ್ಯಾಯಮೂರ್ತಿ ಅಭಯ್‌ ಅಹುಜಾ ಅವರ ಅವಧಿಯನ್ನು ಮತ್ತೊಂದು ವರ್ಷಕ್ಕೆ ವಿಸ್ತರಿಸಲಾಗಿದೆ.

ಆದರೆ, ಪುಷ್ಪಾ ಅವರ ಅವಧಿಯನ್ನು ವಿಸ್ತರಿಸಲಾಗಿಲ್ಲ ಅಥವಾ ಕಾಯಂ ಆಗಿ ನೇಮಿಸುವ ಶಿಫಾರಸನ್ನೂ ಮಾಡಿಲ್ಲ. 2022ರ ಫೆಬ್ರುವರಿಯಲ್ಲಿ ಅವರ ಅವಧಿ ಪೂರ್ಣಗೊಳ್ಳುತ್ತದೆ. ನಂತರ, ಅವರು ಈ ಹಿಂದೆ ಇದ್ದ ಜಿಲ್ಲಾ ನ್ಯಾಯಮೂರ್ತಿ ಸ್ಥಾನಕ್ಕೆ ಮರಳಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.