ADVERTISEMENT

ಲೈಂಗಿಕ ಕಾರ್ಯಕರ್ತೆಯರಿಗೆ ರಾಮಕಥಾ ಬೋಧನೆ

ಪವಿತ್ರ ಸ್ಥಳವನ್ನು ಅಪವಿತ್ರಗೊಳಿಸಿದ ಮೊರಾರಿ ಬಾಪು: ಹಿಂದೂ ಮುಖಂಡರ ಆಕ್ರೋಶ

ಪಿಟಿಐ
Published 23 ಡಿಸೆಂಬರ್ 2018, 19:20 IST
Last Updated 23 ಡಿಸೆಂಬರ್ 2018, 19:20 IST

ಅಯೋಧ್ಯೆ: ಅಯೋಧ್ಯೆಯಲ್ಲಿ 200ಕ್ಕೂ ಹೆಚ್ಚು ಲೈಂಗಿಕ ಕಾರ್ಯಕರ್ತೆಯರಿಗೆ ರಾಮಕಥಾ ಬೋಧಿಸಿದ ಆಧ್ಯಾತ್ಮಿಕ ಗುರು ಮೊರಾರಿ ಬಾಪು ನಡೆಗೆ ಹಿಂದೂ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮುಂಬೈನ ಕಾಮಾಟಿಪುರದಲ್ಲಿನ 200ಕ್ಕೂ ಹೆಚ್ಚು ಲೈಂಗಿಕ ಕಾರ್ಯಕರ್ತರಿಗೆ ಖುದ್ದು ಆಹ್ವಾನ ನೀಡಿದ್ದ ಬಾಪು, ಅವರಿಗೆ ರಾಮಕಥಾ ಪ್ರವಚನ ನೀಡಿದ್ದರು.

‘ರಾಮ ಜನ್ಮಭೂಮಿಯಾದ ಪವಿತ್ರ ಅಯೋಧ್ಯೆಗೆ ಲೈಂಗಿಕ ಕಾರ್ಯಕರ್ತೆಯರನ್ನು ಆಹ್ವಾನಿಸುವ ಮೂಲಕ ಈ ಧರ್ಮಕ್ಷೇತ್ರವನ್ನು ಬಾಪು ಅಪವಿತ್ರಗೊಳಿಸಿದ್ದಾರೆ. ಮೊರಾರಿ ಬಾಪು ಅವರಿಗೆ ಸಮಾಜವನ್ನು ಸುಧಾರಿಸಬೇಕೆಂಬ ಬಯಕೆ ಇದ್ದಿದ್ದೇ ಆದರೆ, ರಾಮಕಥಾ ಕಾರ್ಯಕ್ರಮಗಳನ್ನು ನಕ್ಸಲ್‌ಪೀಡಿತ ಪ್ರದೇಶ ಅಥವಾ ಕಾಮಾಟಿಪುರದಲ್ಲಿ ಏರ್ಪಡಿಸಲಿ’ ಎಂದು ಧರ್ಮಸೇನಾ ಮುಖ್ಯಸ್ಥ, ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಪ್ರಮುಖ ಆರೋಪಿ ಸಂತೋಷ್‌ ದುಬೆ ಹೇಳಿದ್ದಾರೆ.

ADVERTISEMENT

‘ರಾಮನ ನಗರದಲ್ಲಿ ಲೈಂಗಿಕ ಕಾರ್ಯಕರ್ತರು ಸೇರಿರುವುದು ಉತ್ತಮ ಸಂದೇಶವಲ್ಲ. ತಮ್ಮ ಪಾಪವನ್ನು ಕಳೆದುಕೊಳ್ಳಲು ಭಕ್ತರು ಇಲ್ಲಿಗೆ ಬರುತ್ತಾರೆ. ಆದರೆ, ಬಾಪು ಅವರು ಯಾವ ಸಂದೇಶ ನೀಡಲು ಬಯಸುತ್ತಿದ್ದಾರೆ’ ಎಂದು ಅಯೋಧ್ಯೆಯ ದೇಗುಲವೊಂದರ ಮಹಾಂತ ಭರತ್‌ ವ್ಯಾಸ್‌ ಪ್ರಶ್ನಿಸಿದ್ದಾರೆ.

ಬಾಪು ವಿರುದ್ಧ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಪತ್ರ ಬರೆಯುವುದಾಗಿ ಸ್ಥಳೀಯ ಹಿಂದೂ ಮುಖಂಡ ಪ್ರವೀಣ್‌ ಶರ್ಮಾ ಹೇಳಿದ್ದಾರೆ.

ಟೀಕೆಗಳ ಕುರಿತು ಪ್ರತಿಕ್ರಿಯಿಸಿರುವ ಮೊರಾರಿ ಬಾಪು, ‘ರಾಮಚರಿತಮಾನಸದಲ್ಲಿ ತುಳಸಿದಾಸ್‌ ಅವರೇ ಲೈಂಗಿಕ ಕಾರ್ಯಕರ್ತರ ಬಗ್ಗೆ ಉಲ್ಲೇಖಿಸಿದ್ದಾರೆ. ವಂಚಿತ ಸಮುದಾಯದವರಿಗೂ ರಾಮನ ಜೀವನ ಸಂದೇಶ ತಿಳಿಯಲಿ ಎಂಬ ಉದ್ದೇಶದಿಂದ ಪ್ರವಚನ ನೀಡಿದ್ದೇನೆ’ ಎಂದಿದ್ದಾರೆ.

* ರಾಮಜನ್ಮಭೂಮಿಯಾದ ಅಯೋಧ್ಯೆಯಲ್ಲಿ ‘ಲೈಂಗಿಕ ಕಾರ್ಯಕರ್ತೆಯರಂತಹ ಮಹಿಳೆಯರ’ ಉಪಸ್ಥಿತಿ ಸ್ವೀಕಾರಾರ್ಹವಲ್ಲ

ಮಹಾಂತ ಪವನ್‌ದಾಸ್‌ ಶಾಸ್ತ್ರಿ , ರಾಮಕಥಾ ಪ್ರವಚನಕಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.