ADVERTISEMENT

‘ಶರಬತ್‌ ಜಿಹಾದ್’ | ವಿಡಿಯೊ, ಪೋಸ್ಟ್‌ ತೆಗೆದು ಹಾಕುವೆ: ರಾಮದೇವ

ಹಮ್‌ದರ್ದ್‌ ಕಂಪನಿಯ ‘ರೂಹ್‌ ಅಫ್ಜಾ’ ಕುರಿತ ಹೇಳಿಕೆ ಪ್ರಕರಣ * ದೆಹಲಿ ಹೈಕೋರ್ಟ್‌ನಲ್ಲಿ ವಿಚಾರಣೆ

ಪಿಟಿಐ
Published 22 ಏಪ್ರಿಲ್ 2025, 14:24 IST
Last Updated 22 ಏಪ್ರಿಲ್ 2025, 14:24 IST
-
-   

ನವದೆಹಲಿ: ಹಮ್‌ದರ್ದ್‌ ಕಂಪನಿಯ ಉತ್ಪನ್ನ ರೂಹ್‌ ಅಫ್ಜಾ ಕುರಿತಂತೆ ತಾವು ಹೇಳಿದ್ದು ಎನ್ನಲಾದ ‘ಶರಬತ್ ಜಿಹಾದ್‌’ ಹೇಳಿಕೆಗಳು ಇರುವವಿಡಿಯೊಗಳನ್ನು ಸಾಮಾಜಿಕ ಮಾಧ್ಯಮಗಳಿಂದ ತೆಗೆದು ಹಾಕಲಾಗುವುದು ಎಂದು ಯೋಗ ಗುರು ರಾಮದೇವ ಅವರು ದೆಹಲಿ ಹೈಕೋರ್ಟ್‌ಗೆ ಮಂಗಳವಾರ ತಿಳಿಸಿದ್ದಾರೆ.

‘ಈ ಹೇಳಿಕೆಗಳು ನ್ಯಾಯಾಲಯದ ಆತ್ಮಸಾಕ್ಷಿಯನ್ನು ಕಲಕಿವೆ ಹಾಗೂ ಇವುಗಳನ್ನು ಸಮರ್ಥನೆ ಮಾಡಿಕೊಳ್ಳಲು ಸಾಧ್ಯವಿಲ್ಲ’ ಎಂದು ಹೈಕೋರ್ಟ್‌ ಹೇಳಿದ ಬೆನ್ನಲ್ಲೇ ರಾಮದೇವ ಈ ಭರವಸೆ ನೀಡಿದ್ದಾರೆ.

ರಾಮದೇವ ಒಡೆತನದ ಪತಂಜಲಿ ಫುಡ್ಸ್‌ ಲಿಮಿಟೆಡ್‌ ವಿರುದ್ಧ ಹಮ್‌ದರ್ದ್‌ ನ್ಯಾಷನಲ್‌ ಫೌಂಡೇಷನ್‌ ಇಂಡಿಯಾ ದಾಖಲಿಸಿರುವ ಪ್ರಕರಣದ ವಿಚಾರಣೆಯನ್ನು ನ್ಯಾಯಮೂರ್ತಿ ಅಮಿತ್‌ ಬನ್ಸಲ್‌ ನಡೆಸಿದರು.

ADVERTISEMENT

‘ಈ ವಿಚಾರವಾಗಿ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ನಿಮ್ಮ ಕಕ್ಷಿದಾರರಿಗೆ ಹೇಳಿ. ಇಲ್ಲದಿದ್ದರೆ ಕಠಿಣ ಆದೇಶ ಹೊರಡಿಸಬೇಕಾಗುತ್ತದೆ’ ಎಂದು ನ್ಯಾಯಮೂರ್ತಿ ಬನ್ಸಲ್‌ ಅವರು ರಾಮದೇವ ಪರ ವಕೀಲರನ್ನು ಉದ್ದೇಶಿಸಿ ಹೇಳಿದರು.

‘ಪತಂಜಲಿ ಉತ್ಪನ್ನವಾದ ಗುಲಾಬ್‌ ಶರಬತ್ ಕುರಿತ ಪ್ರಚಾರದ ವೇಳೆ ಮಾತನಾಡಿದ್ದ ರಾಮದೇವ ಅವರು, ಹಮ್‌ದರ್ದ್‌ನ ರೂಹ್‌ ಅಫ್ಜಾ ಮಾರಾಟದಿಂದ ಬರುವ ಹಣವನ್ನು ಮದರಸಾ ಮತ್ತು ಮಸೀದಿಗಳನ್ನು ನಿರ್ಮಿಸಲು ಬಳಸಲಾಗುತ್ತದೆ ಎಂಬುದಾಗಿ ಹೇಳಿದ್ದರು’ ಎಂಬ ವಿಚಾರವನ್ನು ಹಮ್‌ದರ್ದ್‌ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದರು.

‘ನಾನು ಯಾವುದೇ ಬ್ರ್ಯಾಂಡ್ ಅಥವಾ ಸಮುದಾಯದ ಹೆಸರು ತೆಗೆದುಕೊಂಡಿಲ್ಲ’ ಎಂದು ಹೇಳುವ ಮೂಲಕ ರಾಮದೇವ ಅವರು ತಮ್ಮ  ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದರು. 

ಮಂಗಳವಾರ ನಡೆದ ವಿಚಾರಣೆ ವೇಳೆ, ಹಮ್‌ದರ್ದ್ ಫೌಂಡೇಷನ್‌ ಪರ ಹಾಜರಿದ್ದ ಹಿರಿಯ ವಕೀಲ ಮುಕುಲ್‌ ರೋಹಟ್ಗಿ, ‘ಇದು ಅವಹೇಳನಕ್ಕಿಂತಲೂ ಮಿಗಿಲಾದ ಪ್ರಕರಣ. ಕೋಮು ಸಂಘರ್ಷಕ್ಕೆ ಕುಮ್ಮಕ್ಕು ಕೊಡುವ ಪ್ರಕರಣವೂ ಇದಾಗಿದೆ’ ಎಂದು ಪೀಠಕ್ಕೆ ತಿಳಿಸಿದರು.

‘ಅವರು ಇದನ್ನು ಶರಬತ್‌ ಜಿಹಾದ್‌ ಎಂದು ಹೇಳುತ್ತಿದ್ದು, ಇದು ದ್ವೇಷ ಭಾಷಣ ಎನಿಸುತ್ತದೆ. ಅವರು ತಮ್ಮ ವ್ಯಾಪಾರ ಮಾಡಲಿ. ಆದರೆ, ನಮಗೆ ತೊಂದರೆ ಕೊಡುವುದು ಏಕೆ? ಎಂದೂ ರೋಹಟ್ಗಿ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ರಾಮದೇವ ಪರ ವಕೀಲ ರಾಜೀವ್ ನಾಯರ್, ‘ರಾಮದೇವ ಅವರ ಹೇಳಿಕೆಗಳಿಗೆ ಸಂಬಂಧಿಸಿದ ವಿಡಿಯೊ ಹಾಗೂ ಮುದ್ರಣ ರೂಪದಲ್ಲಿರುವ ಜಾಹೀರಾತುಗಳನ್ನು ಕೂಡಲೇ ಹಿಂದಕ್ಕೆ ಪಡೆಯಲಾಗುವುದು’ ಎಂದು ಪೀಠಕ್ಕೆ ತಿಳಿಸಿದರು.

ವಕೀಲ ನಾಯರ್ ಅವರ ಹೇಳಿಕೆ ದಾಖಲಿಸಿಕೊಂಡ ಪೀಠ, ‘ಪ್ರತಿಸ್ಪರ್ಧಿಗಳಿಗೆ ಸಂಬಂಧಿಸಿ ಮುಂದಿನ ದಿನಗಳಲ್ಲಿ ಇಂತಹ ಹೇಳಿಕೆಗಳು ಹಾಗೂ ಜಾಹೀರಾತುಗಳನ್ನು ನೀಡುವುದಿಲ್ಲ ಅಥವಾ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ ಮಾಡುವುದಿಲ್ಲ’ ಎಂಬ ಬಗ್ಗೆ ಐದು ದಿನಗಳ ಒಳಗಾಗಿ ರಾಮದೇವ ಅವರು ಪ್ರಮಾಣಪತ್ರ ಸಲ್ಲಿಸಬೇಕು ಎಂದು ಸೂಚಿಸಿ, ವಿಚಾರಣೆಯನ್ನು ಮೇ 1ಕ್ಕೆ ಮುಂದೂಡಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.