
ನವದೆಹಲಿ: ಬಿಜೆಪಿ ನಾಯಕ ಎಲ್.ಕೆ.ಅಡ್ವಾಣಿ ಅವರ 98ನೇ ಹುಟ್ಟು ಹಬ್ಬಕ್ಕೆ ಶುಭಾಶಯ ತಿಳಿಸಿರುವ ಕಾಂಗ್ರೆಸ್ ನಾಯಕ ಶಶಿ ತರೂರ್ ಅವರು, ‘ಬಿಜೆಪಿಯ ಹಿರಿಯ ನಾಯಕನ ದೀರ್ಘ ಕಾಲದ ಸೇವೆಯನ್ನು ಸೀಮಿತ ದೃಷ್ಟಿಯಲ್ಲಿ ನೋಡುವುದು ನ್ಯಾಯೋಚಿತವಲ್ಲ’ ಎಂದು ಹೇಳಿದ್ದಾರೆ.
‘ಜವಾಹರಲಾಲ್ ನೆಹರೂ ಅವರ ವೃತ್ತಿ ಜೀವನದ ಪರಿಪೂರ್ಣತೆಯನ್ನು ಚೀನಾ ಎದುರು ನಡೆದ ಯುದ್ಧದಲ್ಲಿನ ಹಿನ್ನಡೆಯಿಂದ ಮತ್ತು ಇಂದಿರಾಗಾಂಧಿ ಅವರನ್ನು ತುರ್ತು ಪರಿಸ್ಥಿತಿಯಿಂದಷ್ಟೇ ಅಳೆಯಲು ಆಗದು; ಅದೇ ರೀತಿ ಅಡ್ವಾಣಿ ಅವರನ್ನೂ ಒಂದೇ ಒಂದು ವಿವಾದಾತ್ಮಕ ಘಟನೆ ಇಟ್ಟುಕೊಂಡು ನೋಡಲಾಗದು’ ಎಂದು ಅವರು ತಿಳಿಸಿದ್ದಾರೆ.
‘ಪೂಜ್ಯ ಎಲ್.ಕೆ. ಅಡ್ವಾಣಿ ಅವರಿಗೆ 98ನೇ ಹುಟ್ಟುಹಬ್ಬದ ಶುಭಾಶಯಗಳು. ಸಾರ್ವಜನಿಕ ಸೇವೆಗೆ ಅಚಲವಾದ ಬದ್ಧತೆ ಹೊಂದಿರುವ ಅವರು ನಮ್ರ ಮತ್ತು ಸಭ್ಯ ವ್ಯಕ್ತಿ. ಆಧುನಿಕ ಭಾರತದ ಪಥ ರೂಪಿಸುವಲ್ಲಿ ಅವರ ಪಾತ್ರವನ್ನು ಮರೆಯಲಾಗದು. ಅವರು ನಿಜವಾದ ರಾಜತಾಂತ್ರಿಕ. ಅವರ ಸೇವಾ ಜೀವನ ಅನುಕರಣೀಯ’ ಎಂದು ತರೂರ್ ‘ಎಕ್ಸ್’ನಲ್ಲಿ ಶನಿವಾರ ಪೋಸ್ಟ್ ಮಾಡಿದ್ದರು.
ಅದಕ್ಕೆ ಪ್ರತಿಕ್ರಿಯಿಸಿರುವ ವಕೀಲರೊಬ್ಬರು, ‘ಈ ದೇಶದಲ್ಲಿ ದ್ವೇಷದ ಬೀಜಗಳನ್ನು (ಕುಶವಂತ್ ಸಿಂಗ್ ಅವರನ್ನು ಉಲ್ಲೇಖಿಸಿ) ಬಿತ್ತುವುದು ಸಾರ್ವಜನಿಕ ಸೇವೆಯಲ್ಲ’ ಎಂದು ಪೋಸ್ಟ್ ಮಾಡಿದ್ದಾರೆ. ಅವರು ರಾಮಜನ್ಮಭೂಮಿ ಚಳವಳಿಯಲ್ಲಿ ಅಡ್ವಾಣಿ ವಹಿಸಿದ್ದ ಪಾತ್ರವನ್ನು ಸೂಚಿಸಿದ್ದಾರೆ.
ಅದಕ್ಕೆ ಪ್ರತಿಕ್ರಿಯಿಸಿರುವ ತರೂರ್, ‘ಅದನ್ನು ಒಪ್ಪಿಕೊಳ್ಳುತ್ತೇನೆ. ಆದರೆ ಅಡ್ವಾಣಿ ಅವರ ದೀರ್ಘ ಸೇವೆಯನ್ನು ಒಂದು ಹಂತಕ್ಕಷ್ಟೇ ಸೀಮಿತಗೊಳಿಸುವುದು ಸರಿಯಲ್ಲ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.