ADVERTISEMENT

ಲಾಹೋರ್‌ ಥಿಂಕ್‌ ಫೆಸ್ಟ್‌: ಜಟಾಪಟಿಗೆ ಕಾರಣವಾದ ತರೂರ್‌ ಹೇಳಿಕೆ

ಕೋವಿಡ್‌ ನಿಯಂತ್ರಣ– ಪಾಕ್ ಹೊಗಳಿದ ಆರೋಪ

ಪಿಟಿಐ
Published 18 ಅಕ್ಟೋಬರ್ 2020, 14:06 IST
Last Updated 18 ಅಕ್ಟೋಬರ್ 2020, 14:06 IST
ಶಶಿ ತರೂರ್‌
ಶಶಿ ತರೂರ್‌   

ನವದೆಹಲಿ: ಕೋವಿಡ್‌–19 ಪಿಡುಗು ನಿಯಂತ್ರಣ ಕುರಿತು ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಅವರು ‘ಲಾಹೋರ್‌ ಥಿಂಕ್‌ ಫೆಸ್ಟ್‌’ನಲ್ಲಿ ಮಾಡಿದ ಭಾಷಣ ಬಿಜೆಪಿ ಮತ್ತು ಕಾಂಗ್ರೆಸ್‌ ಮಧ್ಯೆ ವಾಕ್ಸಮರಕ್ಕೆ ಕಾರಣವಾಗಿದೆ.

‘ತರೂರ್‌ ಅವರು ಭಾರತದ ಬಗ್ಗೆ ತುಚ್ಛವಾಗಿ ಹಾಗೂ ದೇಶಕ್ಕೆ ಅಪಕೀರ್ತಿ ತರುವ ರೀತಿಯಲ್ಲಿ ಮಾತನಾಡಿದ್ದಾರೆ. ರಾಹುಲ್‌ ಗಾಂಧಿ ಮುಂಬರುವ ಚುನಾವಣೆಯಲ್ಲಿ ಪಾಕಿಸ್ತಾನದಿಂದ ಸ್ಫರ್ಧಿಸಲು ಬಯಸಿದ್ದಾರೆಯೇ’ ಎಂದು ಬಿಜೆಪಿ ಟೀಕಿಸಿದೆ.

‘ಕಾಂಗ್ರೆಸ್‌ ನೀಡುವ ವಾಸ್ತವದ ಹೇಳಿಕೆಗಳಿಗೆ ಬಿಜೆಪಿ ಯಾವಾಗಲೂ ಅತಿರಂಜಿತ ಮಾತುಗಳಿಂದ ಪ್ರತಿಕ್ರಿಯೆ ನೀಡುತ್ತಾ ಬಂದಿದೆ’ ಎಂದು ಕಾಂಗ್ರೆಸ್‌ ತಿರುಗೇಟು ನೀಡಿದೆ.

ADVERTISEMENT

ವಿವರ: ‘ಲಾಹೋರ್‌ ಥಿಂಕ್‌ ಫೆಸ್ಟ್‌’ ಉದ್ದೇಶಿಸಿ ಆನ್‌ಲೈನ್‌ನಲ್ಲಿ ತಾವು ಮಾಡಿರುವ ಭಾಷಣದ ಲಿಂಕ್‌ಅನ್ನು ತರೂರ್‌ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.

ಕೊರೊನಾ ಸೋಂಕು ಪ್ರಸರಣದ ನಿರ್ವಹಣೆ, ಈ ಪಿಡುಗಿನಿಂದಾಗಿ ಭಾರತದ ರಾಜಕಾರಣದ ಮೇಲಾಗುವ ಪರಿಣಾಮ ಏನು ಎಂದು ಪತ್ರಕರ್ತರೊಬ್ಬರು ಪ್ರಶ್ನಿಸಿದ್ದಾರೆ.

ಕೊರೊನಾ ಸೋಂಕು ಪ್ರಸರಣವನ್ನು ತಡೆಗಟ್ಟಲು ಮೋದಿ ನೇತೃತ್ವದ ಸರ್ಕಾರ ಕೈಗೊಂಡ ಕ್ರಮಗಳನ್ನು ತರೂರ್‌ ಟೀಕಿಸಿದ್ದಾರೆ. ಅಲ್ಲದೇ, ಈ ಪಿಡುಗಿನ ವಿರುದ್ಧದ ಹೋರಾಟದ ಸಮಯದಲ್ಲಿ ಮುಸ್ಲಿಮರ ವಿರುದ್ಧ ಪೂರ್ವಗ್ರಹಪೀಡಿತವಾಗಿ ಹಾಗೂ ಮತಾಂಧತೆಯಿಂದ ವರ್ತಿಸಲಾಯಿತು ಎಂಬುದಾಗಿ ತರೂರ್‌ ಆರೋಪಿಸಿದರು ಎಂದು ಬಿಜೆಪಿ ಟೀಕಿಸಿದೆ.

‘ತರೂರ್ ಅವರಂಥ ಕಾಂಗ್ರೆಸ್‌ನ ಹಿರಿಯ ಮುಖಂಡ, ಸಂಸದ ಪಾಕಿಸ್ತಾನದ ವೇದಿಕೆ ಮೂಲಕ ಭಾರತದ ವಿರುದ್ಧ ಇಂಥ ಹೇಳಿಕೆ ನೀಡುತ್ತಾರೆ ಎಂಬುದನ್ನು ನಂಬಲು ಆಗುತ್ತಿಲ್ಲ’ ಎಂದು ಬಿಜೆಪಿ ವಕ್ತಾರ ಸಂಬಿತ್‌ ಪಾತ್ರ ಹೇಳಿದರು.

‘ಅವರು ಭಾರತವನ್ನು ತುಚ್ಛವಾಗಿ ಚಿತ್ರಿಸಿದ್ದಾರೆ. ದೇಶವನ್ನು ಕೀಳಾಗಿ ಬಿಂಬಿಸಿದ್ದಾರೆ’ ಎಂದೂ ಹೇಳಿದರು.

‘ಕೋವಿಡ್‌–19ನ ತೀವ್ರತೆ ಕುರಿತು ರಾಹುಲ್‌ ಗಾಂಧಿ ಫೆಬ್ರುವರಿಯಲ್ಲಿಯೇ ಎಚ್ಚರಿಕೆ ನೀಡಿದ್ದರು’ ಎಂಬ ತರೂರ್‌ ಹೇಳಿಕೆಗೆ ಪ್ರತಿಕ್ರಿಯಿಸಿದ ಪಾತ್ರ, ‘ರಾಹುಲ್‌ ಗಾಂಧಿ ಅವರು ತಮ್ಮ ಹೇಳಿಕೆಗೆ ಪಾಕಿಸ್ತಾನದಲ್ಲಿ ಮನ್ನಣೆ ಸಿಗಬೇಕು ಎಂದು ಬಯಸಿದ್ದರೆ?. ಪಾಕಿಸ್ತಾನದಿಂದ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿದ್ದಾರೆಯೇ’ ಎಂದು ಛೇಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್‌ ವಕ್ತಾರ ಅಭಿಷೇಕ್‌ ಸಿಂಘ್ವಿ, ‘ಆಡಳಿತಾರೂಢ ಪಕ್ಷವೊಂದು ಇಂಥ ಹೇಳಿಕೆ ನೀಡುತ್ತಿರುವುದು ಪ್ರಜಾತಂತ್ರ ವ್ಯವಸ್ಥೆಯನ್ನು, ಈ ವ್ಯವಸ್ಥೆಯಡಿ ನಡೆಯುವ ಚರ್ಚೆಯನ್ನು ಅಣಕಿಸಿದಂತೆ’ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.