ADVERTISEMENT

ಶಾ ನಿಲುವು ಸೇನೆಗೆ ತದ್ವಿರುದ್ಧ: ಕೇಜ್ರಿವಾಲ್‌

ಪಿಟಿಐ
Published 4 ಮಾರ್ಚ್ 2019, 18:59 IST
Last Updated 4 ಮಾರ್ಚ್ 2019, 18:59 IST
   

ನವದೆಹಲಿ: ಬಾಲಾಕೋಟ್‌ ವಾಯುದಾಳಿಯಲ್ಲಿ ಹತರಾದ ಉಗ್ರರ ಸಂಖ್ಯೆಗೆ ಸಂಬಂಧಿಸಿದಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಭಾರತೀಯ ಸೇನೆಯ ನಿಲುವಿಗೆ ತದ್ವಿರುದ್ಧವಾದ ನಿಲುವು ತಾಳಿದ್ದಾರೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್ ಆರೋಪಿಸಿದ್ದಾರೆ.

ಅಹಮದಾಬಾದ್‌ನಲ್ಲಿ ಭಾನುವಾರ ನಡೆದ ಕಾರ್ಯಕ್ರಮವೊಂದರಲ್ಲಿ ಅಮಿತ್‌ ಶಾ, ಭಾರತೀಯ ವಾಯುಸೇನೆ ನಡೆಸಿದ ನಿರ್ದಿಷ್ಟ ದಾಳಿಯಲ್ಲಿ 250ಕ್ಕೂ ಹೆಚ್ಚು ಉಗ್ರರು ಹತರಾಗಿದ್ದಾರೆ ಎಂದು ಹೇಳಿದ್ದರು.

ದಾಳಿಯಲ್ಲಿ 250ಕ್ಕೂ ಹೆಚ್ಚು ಉಗ್ರರು ಹತರಾಗಿದ್ದಾರೆ ಎಂದು ಶಾ ಹೇಳಿದ್ದಾರೆ. ಭಾರತೀಯ ವಾಯುಸೇನೆ ಈ ಬಗ್ಗೆ ಅಧಿಕೃತವಾಗಿ ಏನನ್ನೂ ಹೇಳಿಲ್ಲ. ಶಾ ನೀಡುತ್ತಿರುವ ಸಂಖ್ಯೆಗಳಿಗೂ, ವಾಯುಸೇನೆ ಹೇಳಿಕೆಗೂ ತಾಳೆಯಾಗುತ್ತಿಲ್ಲ ಎಂದು ಎಂದು ಕೇಜ್ರಿವಾಲ್‌ ಟ್ವೀಟ್‌ ಮಾಡಿದ್ದಾರೆ.

ADVERTISEMENT

‘ಅಮಿತ್‌ ಶಾ ಅವರು ವಾಯುಸೇನೆಯನ್ನು ಸುಳ್ಳುಗಾರ ಎಂದು ಕರೆಯುತ್ತಿದ್ದಾರೆ. ಎಂತಹ ಸಂದರ್ಭದಲ್ಲಾದರೂ ಸರಿ ದೇಶ ಇದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ.

ಯಾರನ್ನೂ ಕೊಲ್ಲುವುದು ವಾಯುದಾಳಿಯ ಉದ್ದೇಶವಾಗಿರಲಿಲ್ಲ ಎಂಬ ಕೇಂದ್ರ ಸಚಿವ ಎಸ್‌.ಎಸ್‌. ಅಹ್ಲುವಾಲಿಯಾ ಹೇಳಿಕೆಗಳ ವರದಿಯನ್ನೂ ಕೇಜ್ರಿವಾಲ್‌ ಉಲ್ಲೇಖಿಸಿದ್ದಾರೆ.

ಭಾರತೀಯ ಸೇನೆ ಯಾವುದೇ ಕಾರಣಕ್ಕೂ ಸುಳ್ಳು ಹೇಳಲು ಸಾಧ್ಯವಿಲ್ಲ. ಅಂದರೆ, ಬಿಜೆಪಿ ಸುಳ್ಳು ಹೇಳುತ್ತಿರುವುದು ಸ್ಪಷ್ಟ. ಇಡೀ ದೇಶ ಭಾರತೀಯ ಸೇನೆಯ ಬೆಂಬಲಕ್ಕಿದ್ದರೆ, ಬಿಜೆಪಿಯೊಂದೇ ಸೇನೆಯ ವಿರುದ್ಧ ನಿಂತಿದೆ ಎಂದು ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.