ತಿರುವನಂತಪುರ: ಕೇರಳದ ಕರಾವಳಿಯಲ್ಲಿ ಮುಳುಗಡೆಯಾಗಿರುವ ಲೈಬೀರಿಯಾದ ಸರಕು ಸಾಗಣೆ ಹಡಗಿನಲ್ಲಿದ್ದ ತೈಲದ ಕಂಟೇನರ್‌ಗಳು ಸೋರಿಕೆಯಾಗಿರುವ ಶಂಕೆ ವ್ಯಕ್ತವಾಗಿದ್ದು, ಇದು ಸಾಗರ ಸಂಪನ್ಮೂಲಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಆತಂಕ ಸೃಷ್ಟಿಸಿದೆ.
ಮುಂಗಾರಿನಲ್ಲಿ ಮೀನುಗಳ ಸಂತಾನೋತ್ಪತ್ತಿ ನಡೆಯುತ್ತದೆ. ಇದೇ ಸಂದರ್ಭದಲ್ಲಿ ತೈಲ ಸೋರಿಕೆ ಆಗಿರುವುದು ಆತಂಕವನ್ನು ಹೆಚ್ಚಿಸಿದೆ.
ತೈಲ ಸೋರಿಕೆ ಶಂಕೆ ಹಿನ್ನೆಲೆಯಲ್ಲಿ ಈಗಾಗಲೇ ರಾಜ್ಯ ಮೀನುಗಾರಿಕಾ ಇಲಾಖೆಯು ಸಮುದ್ರದ ನೀರನ್ನು ಪರೀಕ್ಷೆಗೆ ಒಳಪಡಿಸಲು ಮುಂದಾಗಿದೆ. ಕೇಂದ್ರ ಸಮುದ್ರ ಮೀನುಗಾರಿಕಾ ಸಂಶೋಧನಾ ಸಂಸ್ಥೆ( ಸಿಎಂಎಫ್‌ಆರ್‌ಐ) ಕೂಡ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿರುವುದಾಗಿ ಹೇಳಿದೆ.
ಇದಕ್ಕೆ ಸಂಬಂಧಿಸಿದಂತೆ ಸಿಎಂಎಫ್ಆರ್‌ಐ ನಿರ್ದೇಶಕ ಡಾ.ಗ್ರಿನ್‌ಸನ್ ಜಾರ್ಜ್ ಮಾಹಿತಿ ನೀಡಿದ್ದಾರೆ.
‘ಸಮುದ್ರದಲ್ಲಿ ತೈಲ ಸೋರಿಕೆಯಾದರೆ ಅದು ಸಾಗರ ಉತ್ಪನ್ನಗಳ ಇಳುವರಿಯ ಮೇಲೆ ಪರಿಣಾಮ ಬೀರಲಿದೆ. ವಿಶೇಷವಾಗಿ ಮುಂಗಾರು ಅವಧಿಯು ಸಾಗರ ಉತ್ಪನ್ನಗಳ ಇಳುವರಿ ಹೆಚ್ಚಳಕ್ಕೆ ಸೂಕ್ತವಾದ ಕಾಲವಾಗಿದ್ದು, ಇದೇ ಸಂದರ್ಭದಲ್ಲಿ ತೈಲ ಸೋರಿಕೆಯಾದರೆ ಪರಿಣಾಮವೂ ಹೆಚ್ಚಿರಲಿದೆ. ಆದರೆ, ತೈಲ ಸೋರಿಕೆ ಎಷ್ಟು ಪ್ರಮಾಟಣದಲ್ಲಿ ಆಗಿದೆ? ಅದು ಹರಡುವುದನ್ನು ನಾವು ಹೇಗೆ ತಪ್ಪಿಸುತ್ತೇವೆ? ಎಂಬುದರ ಮೇಲೆ ಜಲಸಂಪನ್ಮೂಲ ಹಾಗೂ ಆರ್ಥಿಕತೆ ಮೇಲಿನ ಪರಿಣಾಮವೂ ಅವಲಂಬಿತವಾಗಿದೆ‘ ಎಂದಿದ್ದಾರೆ.
ಜಲ ಮಾಲಿನ್ಯದ ಮೇಲೆ ನಿಗಾ ಇಟ್ಟು, ಅಗತ್ಯ ಸಂದರ್ಭದಲ್ಲಿ ಕ್ರಮ ಕೈಗೊಳ್ಳಲು ಭಾರತೀಯ ಕರಾವಳಿ ಪಡೆಯ ಐಸಿಜಿ ಸಮರ್ಥ್, ಐಸಿಜಿ ಸಕ್ಷಮ್ ಹಾಗೂ ಐಸಿಜಿ ವಿಕ್ರಮ್ ರಕ್ಷಣಾ ಹಡಗುಗಳನ್ನು ಸರಕು ಸಾಗಣೆ ಹಡಗು ಮುಳುಗಡೆಯಾಗಿರುವ ಪ್ರದೇಶದಲ್ಲಿ ನಿಯೋಜಿಸಲಾಗಿದೆ ಎಂದು ಕೇಂದ್ರ ಬಂದರು ಸಚಿವ ಸರ್ವಾನಂದ ಸೋನೊವಾಲ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.