ADVERTISEMENT

ನೇಪಾಳ ಶಾಶ್ವತ ತಲೆನೋವಾದೀತು: ಶಿವಸೇನಾ

ಪಿಟಿಐ
Published 21 ಜುಲೈ 2020, 6:49 IST
Last Updated 21 ಜುಲೈ 2020, 6:49 IST
ಭಾರತ-ಚೀನಾ ಸಂಬಂಧ ಸುಧಾರಣೆಗೆ ಜನರ ಆಗ್ರಹ (ಸಂಗ್ರಹ ಚಿತ್ರ)
ಭಾರತ-ಚೀನಾ ಸಂಬಂಧ ಸುಧಾರಣೆಗೆ ಜನರ ಆಗ್ರಹ (ಸಂಗ್ರಹ ಚಿತ್ರ)   

ಮುಂಬೈ: ‘ನೇಪಾಳದ ಉದ್ಧಟತನಕ್ಕೆ ಈಗಲೇ ಪ್ರತ್ಯುತ್ತರ ನೀಡದಿದ್ದರೆ, ಪಾಕಿಸ್ತಾನದಂತೆ ಆ ರಾಷ್ಟ್ರವೂ ಶಾಶ್ವತವಾಗಿ ಭಾರತಕ್ಕೆ ತಲೆನೋವಾಗುವ ಸಾಧ್ಯತೆ ಇದೆ’ ಎಂದು ಶಿವಸೇನಾ ಎಚ್ಚರಿಸಿದೆ.

ನೇಪಾಳದ ಸಶಸ್ತ್ರ ಪೊಲೀಸರು ಈಚೆಗೆ ಗಡಿಯಲ್ಲಿ ಗುಂಡಿನ ದಾಳಿ ನಡೆಸಿ, ಒಬ್ಬ ಭಾರತೀಯ ವ್ಯಕ್ತಿಯ ಹತ್ಯೆ ಮಾಡಿರುವುದನ್ನು ಉಲ್ಲೇಖಿಸಿ ‍ಪಕ್ಷದ ಮುಖವಾಣಿ ಸಾಮ್ನಾದಲ್ಲಿ ಬರೆದಿರುವ ಸಂಪಾದಕೀಯದಲ್ಲಿ, ‘ಗಡಿಯಲ್ಲಿ ಸದ್ಯಕ್ಕೆ ಚೀನಾ ಶಾಂತಿ ಕಾಪಾಡುತ್ತಿದೆ. ಆದರೆ, ಗುಂಡಿನ ದಾಳಿ ನಡೆಸುವಂತೆ ನೇಪಾಳ ಹಾಗೂ ಪಾಕಿಸ್ತಾನಕ್ಕೆ ಕುಮ್ಮಕ್ಕು ನೀಡುವ ಮೂಲಕ ಭಾರತದ ಗಡಿಯಲ್ಲಿ ಪ್ರಕ್ಷುಬ್ಧತೆ ಮುಂದುವರಿಸುವ ಆಟವಾಡುತ್ತಿದೆ’ ಎಂದು ಆರೋಪಿಸಲಾಗಿದೆ.

‘ನೇಪಾಳದ ಸಶಸ್ತ್ರ ಪೊಲೀಸರು ಜೂನ್‌ 12ರಂದು ನಡೆಸಿದ ದಾಳಿಯಲ್ಲಿ ಒಬ್ಬ ಭಾರತೀಯ ಮೃತಪಟ್ಟು ಇಬ್ಬರು ಗಾಯಗೊಂಡಿದ್ದರು. ‍ಪಾಕಿಸ್ತಾನವು ಒಂದು ವರ್ಷದಲ್ಲಿ 2,700 ಬಾರಿ ಕದನವಿರಾಮ ಉಲ್ಲಂಘಿಸಿದೆ. ಇಲ್ಲಿ 21 ಮಂದಿ ಭಾರತೀಯರು ಸತ್ತಿದ್ದು 94 ಮಂದಿ ಗಾಯಗೊಂಡಿದ್ದಾರೆ. ಕೇಂದ್ರದಲ್ಲಿ ಆಡಳಿತ ನಡೆಸುವವರು ಈ ಕೃತ್ಯಕ್ಕೆ ತಕ್ಕ ಪ್ರತ್ಯುತ್ತರ ನೀಡುವುದು ಯಾವಾಗ’ ಎಂದು ಪ್ರಶ್ನಿಸಿದೆ.

ADVERTISEMENT

‘ಹಿಂದೆ ಪಾಕಿಸ್ತಾನ ಮಾತ್ರ ದಾಳಿ ನಡೆಸುತ್ತಿತ್ತು. ಈಗ ನೇಪಾಳವೂ ಅದನ್ನು ಆರಂಭಿಸಿದೆ. ನೇಪಾಳದ ಬಂದೂಕಿನ ಬ್ಯಾರಲ್‌ಗಳನ್ನು ಒಡೆದುಹಾಕದಿದ್ದರೆ ನೇಪಾಳ ಗಡಿಯು ಸಹ ಪಾಕಿಸ್ತಾನದಂತೆ ಶಾಶ್ವತ ತಲೆನೋವಾಗಿ ಪರಿಣಮಿಸಬಹುದು. ಪಾಕಿಸ್ತಾನದಂತೆ ತಾನು ಚೀನಾದ ಪಕ್ಷಪಾತಿ ಎಂಬುದನ್ನು ನೇಪಾಳ ತಿಳಿಸಿಕೊಟ್ಟಿದೆ’ ಎಂದು ಶಿವಸೇನೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.