ADVERTISEMENT

ನೆಹರು ಸಂಪಾದಿಸಿದ್ದ ಸ್ವತ್ತುಗಳನ್ನು ಮಾರಾಟ ಮಾಡುತ್ತಿರುವ ಕೇಂದ್ರ: ಶಿವ ಸೇನಾ

ಐಎಎನ್ಎಸ್
Published 5 ಸೆಪ್ಟೆಂಬರ್ 2021, 12:14 IST
Last Updated 5 ಸೆಪ್ಟೆಂಬರ್ 2021, 12:14 IST
ಸಂಜಯ್ ರಾವುತ್ (ಪಿಟಿಐ ಚಿತ್ರ)
ಸಂಜಯ್ ರಾವುತ್ (ಪಿಟಿಐ ಚಿತ್ರ)   

ಮುಂಬೈ: ‘ಮಾಜಿ ಪ್ರಧಾನಿ ದಿ. ಜವಾಹರ್‌ಲಾಲ್ ನೆಹರು ಅವರು ನಡೆಸಿದ್ದ ದೂರದೃಷ್ಟಿಯ ಆಡಳಿತವು ಇಂದಿನ ಆರ್ಥಿಕ ಬಿಕ್ಕಟ್ಟಿನಿಂದ ದೇಶವನ್ನು ಪಾರು ಮಾಡುತ್ತಿದೆ. ಅವರು ಸಂಪಾದಿಸಿ ಇಟ್ಟಿದ್ದ ರಾಷ್ಟ್ರೀಯ ಸ್ವತ್ತುಗಳನ್ನು ಮಾರಾಟ ಮಾಡುವ ಮೂಲಕ ಇಂದಿನ ಕೇಂದ್ರ ಸರ್ಕಾರ ಮೋಜಿನಲ್ಲಿ ನಿರತವಾಗಿದೆ’ ಎಂದು ಶಿವ ಸೇನಾ ಟೀಕಿಸಿದೆ.

‘ಬಿಜೆಪಿ ಸರ್ಕಾರಕ್ಕೆ ಸೋನಿಯಾ ಗಾಂಧಿ, ರಾಹುಲ್ ಅಥವಾ ಪ್ರಿಯಾಂಕಾ ಜತೆ ಭಿನ್ನಾಭಿಪ್ರಾಯ ಇರಬಹುದು. ಆದರೆ ನೆಹರು ವಿರುದ್ಧ ಯಾಕೆ ದ್ವೇಷ? ನೆಹರು ಅಂದು ಸ್ಥಾಪಿಸಿದ್ದ ಸಂಸ್ಥೆಗಳನ್ನು ಹಣಕ್ಕಾಗಿ ಈಗಿನ ಸರ್ಕಾರ ಮಾರಾಟ ಮಾಡುತ್ತಿದೆ’ ಎಂದು ಶಿವ ಸೇನಾ ಮುಖ್ಯ ವಕ್ತಾರ ಸಂಜಯ್ ರಾವುತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ವಾತಂತ್ರ್ಯೋತ್ಸವದ 75ನೇ ವರ್ಷಾಚರಣೆ ಪ್ರಚಾರಾರ್ಥ ಕೇಂದ್ರ ಶಿಕ್ಷಣ ಸಚಿವಾಲಯವು ‘ಭಾರತೀಯ ಐತಿಹಾಸಿಕ ಸಂಶೋಧನಾ ಸಂಸ್ಥೆಯು (ಐಸಿಎಚ್‌ಆರ್)’ ಚಿತ್ರಗಳನ್ನು ಬಿಡುಗಡೆ ಮಾಡಿದ್ದು ಇದರಲ್ಲಿ ದೇಶದ ಮೊದಲ ಪ್ರಧಾನಿ ನೆಹರು ಮತ್ತು ಮೌಲಾನಾ ಅಬುಲ್ ಕಲಾಂ ಆಜಾದ್ ಅವರ ಚಿತ್ರಗಳು ಒಳಗೊಂಡಿರಲಿಲ್ಲ. ಇದರ ಬೆನ್ನಲ್ಲೇ ರಾವುತ್ ಅವರು ಕೇಂದ್ರದ ವಿರುದ್ಧ ಹೇಳಿಕೆ ನೀಡಿದ್ದಾರೆ.

‘ನೆಹರು ಅವರು ಅಂದು ರಾಷ್ಟ್ರೀಯ ಸ್ವತ್ತುಗಳನ್ನು ಸ್ಥಾಪಿಸಿ ಇಡದೇ ಇದ್ದಿದ್ದರೆ ಇಂದು ಜನರು ನಿರುದ್ಯೋಗ, ಹಸಿವು, ಅರಾಜಕತೆಯಿಂದ ಬಳಲಬೇಕಾಗುತ್ತಿತ್ತು’ ಎಂದು ರಾವುತ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.