ಅಕೋಲಾ (ಮಹಾರಾಷ್ಟ್ರ): ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಜನ್ಮದಿನದ ಶುಭಕೋರಿ ಹಾಕಿದ್ದ ಪೋಸ್ಟರ್ ಅನ್ನು ಕಿಡಿಗೇಡಿಗಳು ಹರಿದುಹಾಕಿದ್ದಾರೆ ಎಂದು ಆರೋಪಿಸಿ ಶಿವಸೇನಾ (ಯುಬಿಟಿ) ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದ್ದಾರೆ.
ಉದ್ಧವ್ ಅವರಿಗೆ ಶುಭಕೋರಿ ಅಕೋಲಾದ ಅಂಚೆ ಕಚೇರಿ ವೃತ್ತದಲ್ಲಿ ಪೋಸ್ಟರ್ ಹಾಕಲಾಗಿತ್ತು. ಈ ಪೋಸ್ಟರ್ ಅನ್ನು ಹರಿದುಹಾಕಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಕಾರ್ಯಕರ್ತರು ನಗರದಲ್ಲಿ ರಸ್ತೆ ತಡೆ ನಡೆಸಿದರು ಎಂದು ಪೊಲೀಸರು ತಿಳಿಸಿದ್ದಾರೆ.
'ಶಿವಸೇನಾ (ಯುಬಿಟಿ) ಕಾರ್ಯಕರ್ತರು ನಗರದ ಮುಖ್ಯರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಹಲವರನ್ನು ವಶಕ್ಕೆ ಪಡೆದ ನಂತರ ಸಂಚಾರ ಸಹಜ ಸ್ಥಿತಿಗೆ ಮರಳಿದೆ' ಎಂದು ಅವರು ಹೇಳಿದ್ದಾರೆ.
288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಗೆ ಈ ವರ್ಷಾಂತ್ಯದಲ್ಲಿ ಚುನಾವಣೆ ನಡೆಯಲಿದೆ.
ಮಹಾರಾಷ್ಟ್ರದಲ್ಲಿರುವ ಬಿಜೆಪಿ ನೇತೃತ್ವದ 'ಮಹಾಯುತಿ' ಮೈತ್ರಿಕೂಟಕ್ಕೆ ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ನಿರೀಕ್ಷಿತ ಯಶಸ್ಸು ಲಭಿಸಿರಲಿಲ್ಲ. ಇಲ್ಲಿನ 48 ಲೋಕಸಭಾ ಕ್ಷೇತ್ರಗಳ ಪೈಕಿ 17 ಕ್ಷೇತ್ರಗಳಲ್ಲಷ್ಟೇ ಗೆಲುವು ಸಾಧಿಸಿತ್ತು. ಇದರಲ್ಲಿ, ಬಿಜೆಪಿ 9, ಮುಖ್ಯಮಂತ್ರಿ ಏಕನಾಥ ಶಿಂದೆ ನೇತೃತ್ವದ ಶಿವಸೇನಾ 7 ಮತ್ತು ಎನ್‌ಸಿಪಿ 1 ಸ್ಥಾನ ಗೆದ್ದಿತ್ತು.
ಉಳಿದಂತೆ, ಕಾಂಗ್ರೆಸ್, ಶಿವಸೇನಾ (ಯುಬಿಟಿ) ಹಾಗೂ ಎನ್‌ಸಿಪಿ ಒಳಗೊಂಡ ಮಹಾ ವಿಕಾಸ ಆಘಾಡಿ (ಎಂವಿಎ) ಮೈತ್ರಿಕೂಟ 30 ಕ್ಷೇತ್ರಗಳಲ್ಲಿ ಜಯ ಕಂಡಿತ್ತು. ಕಾಂಗ್ರೆಸ್ 13 ಸ್ಥಾನಗಳಲ್ಲಿ, ಶಿವಸೇನಾ (ಯುಬಿಟಿ) 9 ಕಡೆ ಹಾಗೂ ಎನ್‌ಸಿಪಿ (ಎಸ್‌ಪಿ) 8ರಲ್ಲಿ ಗೆಲುವು ಸಾಧಿಸಿತ್ತು. ಉಳಿದೊಂದು ಕ್ಷೇತ್ರ ಪಕ್ಷೇತರ ಅಭ್ಯರ್ಥಿ ಪಾಲಾಗಿತ್ತು.
ಹೀಗಾಗಿ, ವಿಧಾನಸಭೆ ಚುನಾವಣೆ ಗೆಲುವಿಗಾಗಿ ಎರಡೂ ಮೈತ್ರಿಕೂಟಗಳು ಕಸರತ್ತು ಆರಂಭಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.