ADVERTISEMENT

ಮಹಾರಾಷ್ಟ್ರ: ರಾಜ್ಯಪಾಲರನ್ನು ವಾಪಸ್ ಕರೆಸಿಕೊಳ್ಳಲು ಶಿವಸೇನಾ ಒತ್ತಾಯ

ಪಿಟಿಐ
Published 13 ಫೆಬ್ರುವರಿ 2021, 10:45 IST
Last Updated 13 ಫೆಬ್ರುವರಿ 2021, 10:45 IST
ಶಿವಸೇನಾ
ಶಿವಸೇನಾ   

ಮುಂಬೈ: ಕೇಂದ್ರ ಸರ್ಕಾರಕ್ಕೆ ಸಂವಿಧಾನದ ಘನತೆ ಎತ್ತಿ ಹಿಡಿಯುವ ಇರಾದೆ ಇದ್ದರೆ, ಸದಾ ಬಿಜೆಪಿ ಪಕ್ಷಪಾತಿಯಾಗಿರುವ ಮಹಾರಾಷ್ಟ್ರದ ರಾಜ್ಯಪಾಲ ಭಗತ್‌ಸಿಂಗ್ ಕೊಶಿಯಾರಿ ಅವರನ್ನು ವಾಪಸ್ ಕರೆಸಿಕೊಳ್ಳುವಂತೆ ಶಿವಸೇನಾ ಕೇಂದ್ರವನ್ನು ಒತ್ತಾಯಿಸಿದೆ.

‘ಮಹಾ ವಿಕಾಸ್ ಅಘಾಡಿ (ಎಂವಿಎ) ಒಕ್ಕೂಟದ ಸರ್ಕಾರ ಸ್ಥಿರ ಮತ್ತು ಪ್ರಬಲವಾಗಿದೆ‘ ಎಂದು ಪ್ರತಿಪಾದಿಸಿರುವ ಶಿವಸೇನಾ, ‘ರಾಜ್ಯಪಾಲರ ಮೂಲಕ ಮಹಾರಾಷ್ಟ್ರ ಸರ್ಕಾರವನ್ನು ಅಸ್ತಿರಗೊಳಿಸಲು ಸಾಧ್ಯವಿಲ್ಲ‘ ಎಂದು ಸೇನಾ ಮುಖವಾಣಿ ‘ಸಾಮ್ನಾ‘ದ ಸಂಪಾದಕೀಯದಲ್ಲಿ ಹೇಳಿದೆ.

ಇತ್ತೀಚೆಗೆ ರಾಜ್ಯಪಾಲರಿಗೆ ಸರ್ಕಾರಿ ವಿಮಾನದಲ್ಲಿ ಪ್ರಯಾಣಿಸಲು ಅನುಮತಿ ನಿರಾಕರಿಸಿರುವ ಕುರಿತು ಉಲ್ಲೇಖಿಸಿರುವ ಶಿವಸೇನಾ ‘ಅದು ರಾಜ್ಯಪಾಲರ ಖಾಸಗಿ ಪ್ರವಾಸವಾಗಿತ್ತು. ಕಾನೂನಿನ ಪ್ರಕಾರ, ಮುಖ್ಯಮಂತ್ರಿಯವರೂ ಖಾಸಗಿ ಪ್ರವಾಸಕ್ಕೆ ಸರ್ಕಾರದ ವಿಮಾನ ಬಳಸುವಂತಿಲ್ಲ. ರಾಜ್ಯಪಾಲರ ವಿಷಯದಲ್ಲೂ ನಮ್ಮ ಸರ್ಕಾರ ಮುಖ್ಯಮಂತ್ರಿಗಳ ಕಚೇರಿಯ ನಿಯಮಗಳ ಅನುಸಾರ ನಡೆದುಕೊಂಡಿದೆ‘ ಎಂದು ಹೇಳಿದೆ.

ADVERTISEMENT

‘ರಾಜ್ಯ ಸರ್ಕಾರ ಅನುಮತಿ ನೀಡದಿದ್ದರೂ, ಗುರುವಾರ ಬೆಳಿಗ್ಗೆ ರಾಜ್ಯ ಸರ್ಕಾರದ ವಿಮಾನದಲ್ಲಿ ಕುಳಿತು ಡೆಹ್ರಾಡೂನ್‌ಗೆ ಹೊರಟಿದ್ದರು. ವಿಮಾನ ಹಾರಾಟಕ್ಕೆ ಸರ್ಕಾರ ಅನುಮತಿ ನೀಡದ ಕಾರಣ ಅವರು ವಾಣಿಜ್ಯ ವಿಮಾನದಲ್ಲಿ ಡೆಹ್ರಾಡೂನ್‌ಗೆ ಪ್ರಯಾಣಿಸಬೇಕಾಗಿದೆ. ಆದರೆ, ವಿರೋಧ ಪಕ್ಷ ಬಿಜೆಪಿ ಇದನ್ನೇ ದೊಡ್ಡ ಸಮಸ್ಯೆಯನ್ನಾಗಿ ಸೃಷ್ಟಿಸುತ್ತಿದೆ. ಅನುಮತಿ ಇಲ್ಲದಿದ್ದರೂ, ರಾಜ್ಯಪಾಲರು ವಿಮಾನದಲ್ಲಿ ಏಕೆ ಕುಳಿತುಕೊಂಡರು‘ ಎಂದು ಶಿವಸೇನಾ ಪ್ರಶ್ನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.