ADVERTISEMENT

ಬಿಜೆಪಿ ಸೇರಿದ ಜಿತಿನ್‌ ವಿರುದ್ಧ ಸಿಬಲ್‌ ವಾಗ್ದಾಳಿ

ಪಿಟಿಐ
Published 10 ಜೂನ್ 2021, 16:27 IST
Last Updated 10 ಜೂನ್ 2021, 16:27 IST
ಕಪಿಲ್‌ ಸಿಬಲ್‌
ಕಪಿಲ್‌ ಸಿಬಲ್‌   

ನವದೆಹಲಿ: ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ ಜಿತಿನ್‌ ಪ್ರಸಾದ ಅವರು ‘ರಾಜಕೀಯ ಪ್ರಸಾದ’ ಅಥವಾ ವೈಯಕ್ತಿಕ ಲಾಭಗಳಿಗಾಗಿ ಪಕ್ಷಾಂತರ ಮಾಡಿರಬಹುದು ಎಂದು ಕಾಂಗ್ರೆಸ್‌ ಹಿರಿಯ ಮುಖಂಡ ಕಪಿಲ್‌ ಸಿಬಲ್‌ ವಾಗ್ದಾಳಿ ನಡೆಸಿದ್ದಾರೆ.

‘‘ಒಂದು ವೇಳೆ ಪಕ್ಷವು ನನ್ನನ್ನು ‘ಮೃತ ಮರ’ ಅಥವಾ ಯಾವುದೇ ಪ್ರಯೋಜನವಿಲ್ಲ ಎಂದು ಕಡೆಗಣಿಸಿದರೆ ಪಕ್ಷ ತ್ಯಜಿಸುವ ಬಗ್ಗೆ ಚಿಂತಿಸಬಹುದು. ಆದರೆ ಯಾವುದೇ ಕಾರಣಕ್ಕೂ ಬಿಜೆಪಿಗೆ ಸೇರುವುದಿಲ್ಲ. ಅಂಥ ಬೆಳವಣಿಗೆಯು ನನ್ನ ಕೊನೆಯುಸಿರು ಇರುವ ತನಕ ಸಂಭವಿಸುವುದಿಲ್ಲ’’ ಎಂದು ಸಿಬಲ್‌ ಪ್ರತಿಪಾದಿಸಿದರು.

ಪಕ್ಷ ಬಿಡುವುದು ಜಿತಿನ್‌ ಅವರ ವೈಯಕ್ತಿಕ ಆಯ್ಕೆ ಆಗಿರಬಹುದು, ಆದರೆ ಅವರು ಬಿಜೆಪಿ ಸೇರಲು ಏಕೆ ನಿರ್ಧರಿಸಿದರು ಎಂಬುದು ಆಶ್ಚರ್ಯ ತರಿಸಿದೆ ಎಂದು ಅವರು ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ADVERTISEMENT

‘ಪ್ರಸಾದ (ವೈಯಕ್ತಿಕ ಲಾಭ) ರಾಜಕೀಯವನ್ನು ಹೊರತುಪಡಿಸಿ ಅದಕ್ಕೆ ತರ್ಕಬದ್ಧ ಆಧಾರವೇನು ಎಂದು ಪ್ರಶ್ನಿಸಿದ ಸಿಬಲ್‌, ದೇಶದಾದ್ಯಂತ ಈ ರೀತಿ ನಡೆಯುತ್ತಿರುವುದನ್ನು ನಾವು ನೋಡುತ್ತಿದ್ದೇವೆ’ ಎಂದು ಬೇಸರ ವ್ಯಕ್ತಪಡಿಸಿದರು.

ಕಾಂಗ್ರೆಸ್‌ ಪಕ್ಷದಲ್ಲಿ ಆಗಬೇಕಾದ ಸುಧಾರಣೆಗಳಿಗೆ ಸಂಬಂಧಿಸಿದಂತೆ ಪಕ್ಷದ ಮುಖ್ಯಸ್ಥರಿಗೆ ಬರೆದ ಪತ್ರದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಇದನ್ನು ಪಕ್ಷದ ಅತ್ಯುನ್ನತ ರಾಜಕೀಯ ನಾಯಕರು ನಿರ್ಧರಿಸಬೇಕಿದೆ. ಹಾಗಾಗಿ ನಾನು ಪ್ರತಿಕ್ರಿಯಿಸುವುದಿಲ್ಲ’ ಎಂದರು

ಪಕ್ಷದಲ್ಲಿ ಸಂಘಟನಾತ್ಮಕ ಸುಧಾರಣೆಗೆ ಆಗ್ರಹಿಸಿ ಪತ್ರ ಬರೆದಿರುವ 22 (ಈಗ ಪಕ್ಷದಲ್ಲಿರುವ) ಮಂದಿ ಹಾಗೂ ಇನ್ನೂ ಇತರರು ಪಕ್ಷದ ಸಮಸ್ಯೆಗಳನ್ನು ಬಗೆಹರಿಸಿ, ಪಕ್ಷವನ್ನು ಬಲಪಡಿಸಲು ಶ್ರಮಿಸುತ್ತಲೇ ಇರುತ್ತೇವೆ ಎಂದು ಅವರು ಹೇಳಿದರು.

‘ಒಂದು ವೇಳೆ ಪಕ್ಷದ ಪ್ರಮುಖರು ನನ್ನ ಅಗತ್ಯ ಪಕ್ಷಕ್ಕಿಲ್ಲ ಎಂದು ಹೇಳಿದರೆ, ಆಗ ನಾನು ಏನು ಮಾಡಬೇಕು ಎಂಬುದನ್ನು ನಿರ್ಧರಿಸುತ್ತೇನೆ. ಆದರೆ ಬದುಕಿರುವ ತನಕ ಬಿಜೆಪಿಗೆ ಸೇರುವುದಿಲ್ಲ’ ಎಂದು ತಿಳಿಸಿದರು.

ಕಾಂಗ್ರೆಸ್‌ನೊಂದಿಗೆ ಹಲವಾರು ದಶಕಗಳ ಕಾಲ ಒಡನಾಟ ಹೊಂದಿದ್ದ, ಮೂರು ದಶಕಗಳಿಂದ ಬಿಜೆಪಿಯನ್ನು ವಿರೋಧಿಸಿಕೊಂಡು ಬಂದಿದ್ದ ಜಿತಿನ್‌ ಅವರು ಇದೀಗ ಬಿಜೆಪಿ ಸೇರಿರುವುದಕ್ಕೆ ಯಾವ ಸೈದ್ಧಾಂತಿಕ ಸಮರ್ಥನೆ ನೀಡುತ್ತಾರೆ ಎಂದು ಸಿಬಲ್‌ ಪ್ರಶ್ನಿಸಿದರು.

ಜಿತಿನ್‌ ಪ್ರತಿಕ್ರಿಯೆ:ಇದಕ್ಕೆ ಪ್ರತಿಕ್ರಿಯಿಸಿರುವ ಜಿತಿನ್‌ ಪ್ರಸಾದ ಅವರು, ‘ನಾನು ಕಾಂಗ್ರೆಸ್‌ ತೊರೆಯಲು ಯಾವುದೇ ವ್ಯಕ್ತಿ ಅಥವಾ ಹುದ್ದೆಯ ನಿರೀಕ್ಷೆಯಿಂದಲ್ಲ. ಕಾಂಗ್ರೆಸ್‌ ಪಕ್ಷ ಮತ್ತು ಜನರ ನಡುವಿನ ಸಂಪರ್ಕ ಕಡಿತವಾಗುತ್ತಿದ್ದು, ಉತ್ತರ ಪ್ರದೇಶದಲ್ಲಿ ಪಕ್ಷ ಪಡೆಯುತ್ತಿರುವ ಮತದ ಪಾಲು ಕುಗ್ಗುತ್ತಿದೆ. ಅಲ್ಲದೆ ಪಕ್ಷವನ್ನು ಪುನರುಜ್ಜೀವನಗೊಳಿಸುವ ಯಾವುದೇ ಯೋಜನೆಗಳೂ ಇಲ್ಲವಾಗಿವೆ. ಹಾಗಾಗಿ ನಾನು ಕಾಂಗ್ರೆಸ್‌ ತ್ಯಜಿಸಿದೆ’ ಬಿಜೆಪಿ ಸೇರಿದ ಜಿತಿನ್‌ ಪ್ರಸಾದ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.