ADVERTISEMENT

ಕಮಲನಾಥ್‌ ಮೇಲೆ ಸಿಖ್‌ ಗಲಭೆ ಕರಿನೆರಳು

ಪಿಟಿಐ
Published 13 ಡಿಸೆಂಬರ್ 2018, 18:30 IST
Last Updated 13 ಡಿಸೆಂಬರ್ 2018, 18:30 IST
ಕಮಲನಾಥ್‌
ಕಮಲನಾಥ್‌   

ನವದೆಹಲಿ: ಮಧ್ಯ ಪ್ರದೇಶ ಮುಖ್ಯಮಂತ್ರಿಹುದ್ದೆಯ ಪ್ರಬಲ ಆಕಾಂಕ್ಷಿ ಕಮಲನಾಥ್‌ ವಿರುದ್ಧ ಸಿಖ್‌ ಸಮುದಾಯ ಧ್ವನಿ ಎತ್ತಿದೆ. 1984ರ ಸಿಖ್‌ ವಿರೋಧಿ ಗಲಭೆಯ ಸಂಚುಕೋರರನ್ನು ಕಾಂಗ್ರೆಸ್‌ ಪಕ್ಷವು ರಕ್ಷಿಸುತ್ತಿದೆ ಎಂದು ಶಿರೋಮಣಿ ಅಕಾಲಿ ದಳದ ಮುಖಂಡ ಮಂಜಿಂದರ್‌ ಸಿಂಗ್‌ ಸಿರ್ಸಾ ಆರೋಪಿಸಿದ್ದಾರೆ. ಕಮಲನಾಥ್‌ ಆಯ್ಕೆಯ ವಿರುದ್ಧ ದೇಶದಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.

1984ರಲ್ಲಿ ಇಂದಿರಾ ಗಾಂಧಿ ಹತ್ಯೆಯ ಬಳಿಕ ದೆಹಲಿಯಲ್ಲಿ ಸಿಖ್ಖರ ಮೇಲೆ ನಡೆದ ದಾಳಿಯ ಹಿಂದೆ ಕಮಲನಾಥ್‌ ಅವರ ಕೈವಾಡ ಇತ್ತು ಎಂದು ಸಿರ್ಸಾ ಆಪಾದಿಸಿದ್ದಾರೆ.

ಪಂಜಾಬ್‌ ಮತ್ತು ಹರಿಯಾಣ ರಾಜ್ಯಗಳ ಕಾಂಗ್ರೆಸ್‌ ಉಸ್ತುವಾರಿ ಕಾರ್ಯದರ್ಶಿಯಾಗಿ ಕಮಲನಾಥ್‌ ಅವರನ್ನು ನೇಮಿಸಿದಾಗ ಸಿಖ್‌ ಸಮುದಾಯದ ಜನರು ವಿರೋಧ ವ್ಯಕ್ತಪಡಿಸಿದ್ದರು. ಹಾಗಾಗಿ ಪಂಜಾಬ್‌ ಉಸ್ತುವಾರಿಯನ್ನು ಬೇರೆಯವರಿಗೆ ವಹಿಸಲಾಗಿತ್ತು.

ADVERTISEMENT

ಸಿಖ್ ವಿರೋಧಿ ಗಲಭೆಗೆ ಸಂಬಂಧಿಸಿ ಕಮಲನಾಥ್‌ ವಿರುದ್ಧ ಬಲವಾದ ಸಾಕ್ಷ್ಯ ಇದೆ ಎಂದು ಎಎಪಿ ಮುಖಂಡ ಮತ್ತು ಸುಪ್ರೀಂ ಕೋರ್ಟ್‌ ವಕೀಲ ಎಚ್‌.ಎಸ್‌. ಫೂಲ್ಕ ಹೇಳಿದ್ದಾರೆ. ಈ ಆರೋಪಕ್ಕೆ ಸಂಬಂಧಿಸಿ ನ್ಯಾಯದ ಚಕ್ರ ಇನ್ನಷ್ಟೇ ಅವರ ವಿರುದ್ಧ ತಿರುಗಲಿದೆ ಎಂದು ಅವರು ಹೇಳಿದ್ದಾರೆ.

ಫೂಲ್ಕ ಅವರು ಸಿಖ್‌ ವಿರೋಧಿ ಗಲಭೆ ಸಂತ್ರಸ್ತರ ಪರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ವಾದಿಸುತ್ತಿದ್ದಾರೆ.

ಗಲಭೆಯಲ್ಲಿ ಕಮಲನಾಥ್‌ ಕೈವಾಡ ಇತ್ತು ಎಂಬುದು ಕಾಂಗ್ರೆಸ್‌ ಪಕ್ಷಕ್ಕೆ ಗೊತ್ತಿದೆ. ಹಾಗಾಗಿಯೇ 2017ರಲ್ಲಿ ಪಂಜಾಬ್‌ ವಿಧಾನಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್‌ ಉಸ್ತುವಾರಿಯಿಂದ ಕಮಲನಾಥ್‌ ಅವರನ್ನು ಕೈಬಿಡಲಾಯಿತು ಎಂದು ಬಿಜೆಪಿ ದೆಹಲಿ ಘಟಕದ ವಕ್ತಾರ ತಾಜಿಂದರ್‌ ಸಿಂಗ್‌ ಬಗ್ಗ ಹೇಳಿದ್ದಾರೆ.

***

ಕಮಲನಾಥ್‌ ವಿರುದ್ಧ ಸಾಕಷ್ಟು ಸಾಕ್ಷ್ಯಗಳಿವೆ. 1984ರ ಸಿಖ್‌ ವಿರೋಧಿ ಗಲಭೆಯಲ್ಲಿ ಭಾಗಿಯಾದವರು ಮಧ್ಯ ಪ್ರದೇಶ ಮುಖ್ಯಮಂತ್ರಿಯಾಗಬೇಕೇ ಎಂಬುದನ್ನು ರಾಹುಲ್‌ ಗಾಂಧಿ ನಿರ್ಧರಿಸಬೇಕು

-ಎಚ್‌.ಎಸ್‌. ಫೂಲ್ಕ, ಸುಪ್ರೀಂ ಕೋರ್ಟ್‌ ವಕೀಲ

ಗಾಂಧಿ ಕುಟುಂಬ ಅಧಿಕಾರಕ್ಕೆ ಬಂದಾಗಲೆಲ್ಲ 1984ರ ಗಲಭೆಕೋರರನ್ನು ರಕ್ಷಿಸುತ್ತದೆ. ಈಗ, ಮಧ್ಯ ಪ್ರದೇಶ ಮುಖ್ಯಮಂತ್ರಿ ಹುದ್ದೆಯನ್ನು ಕಮಲನಾಥ್‌ ಅವರಿಗೆ ಉಡುಗೊರೆಯಾಗಿ ನೀಡಲಾಗಿದೆ

-ಮಂಜಿಂದರ್‌ ಸಿಂಗ್‌ ಸಿರ್ಸಾ, ಅಕಾಲಿ ದಳ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.