
ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಭಾಗವಾಗಿ ಪಟ್ಟಿ ಮಾಡಿರುವ ‘ಹೊಂದಾಣಿಕೆ’ ಆಗದ ಮತದಾರರ ಹೆಸರುಗಳನ್ನು ಎಲ್ಲ ಗ್ರಾಮ ಪಂಚಾಯಿತಿ ಭವನಗಳು ಮತ್ತು ಬ್ಲಾಕ್ ಕಚೇರಿಗಳಲ್ಲಿ ಪ್ರಕಟಿಸಬೇಕು ಎಂದು ಸುಪ್ರೀಂ ಕೋರ್ಟ್ ಸೋಮವಾರ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದೆ.
ಎಸ್‌ಐಆರ್ ಪ್ರಕ್ರಿಯೆಯು ಪಾರದರ್ಶಕವಾಗಿರಬೇಕು ಮತ್ತು ಯಾರಿಗೂ ಅನನುಕೂಲತೆ ಆಗದಂತೆ ಎಚ್ಚರವಹಿಸಬೇಕು ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿಗಳಾದ ದೀಪಾಂಕರ್ ದತ್ತಾ ಹಾಗೂ ಜಾಯ್‌ಮಾಲ್ಯ ಬಾಗ್ಚಿ ಅವರ ಪೀಠವು ಹೇಳಿತು.
ಎಸ್‌ಐಆರ್‌ಗೆ ಭಾಗವಾಗಿ 2002ರ ಮತ್ತು 2025ರ ಮತದಾರರ ಪಟ್ಟಿಯನ್ನು ಹೋಲಿಕೆ ಮಾಡುವಾಗ ಕೆಲವರ ವಿವರಗಳು ತಾಳೆಯಾಗಿಲ್ಲ. ಪೋಷಕರ ಹೆಸರಿನಲ್ಲಿ ಹೊಂದಿಕೆಯಾಗದೆ ಇರುವುದು ಮತ್ತು ಮತದಾರರ ಹಾಗೂ ಅವರ ಪೋಷಕರ ನಡುವಿನ ವಯಸ್ಸಿನ ಅಂತರವು 15 ವರ್ಷಕ್ಕಿಂತ ಕಡಿಮೆ ಅಥವಾ 50 ವರ್ಷಗಳಿಗಿಂತ ಹೆಚ್ಚು ಇರುವುದು ಕಂಡುಬಂದಿದೆ. ಅಂತಹ ಮತದಾರರ ಹೆಸರನ್ನು ‘ಹೊಂದಾಣಿಕೆ’ ಆಗದ ಪಟ್ಟಿಯಲ್ಲಿ ಸೇರಿಸಲಾಗಿದೆ.
ರಾಜ್ಯದಲ್ಲಿ 1.25 ಕೋಟಿ ಮತದಾರರು ‘ಹೊಂದಾಣಿಕೆ’ ಆಗದ ಪಟ್ಟಿಯಲ್ಲಿದ್ದಾರೆ ಎಂಬುದನ್ನು ಗಮನಿಸಿದ ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠ, ‘ಅಂತಹ ಮತದಾರರಿಗೆ ಪಂಚಾಯಿತಿ ಭವನಗಳು ಅಥವಾ ಬ್ಲಾಕ್ ಕಚೇರಿಗಳಲ್ಲಿ ದಾಖಲೆಗಳು ಹಾಗೂ ಆಕ್ಷೇಪಣೆಗಳನ್ನು ಸಲ್ಲಿಸಲು ವ್ಯವಸ್ಥೆ ಮಾಡಬೇಕು. ಅದಕ್ಕಾಗಿ ಸಾಕಷ್ಟು ಸಿಬ್ಬಂದಿಯನ್ನು ಚುನಾವಣಾ ಆಯೋಗಕ್ಕೆ ಒದಗಿಸಬೇಕು’ ಎಂದು ಪಶ್ಚಿಮ ಬಂಗಾಳ ಸರ್ಕಾರಕ್ಕೆ ಸೂಚಿಸಿತು.
ಕಾನೂನು ಮತ್ತು ಸುವ್ಯವಸ್ಥೆಗೆ ಯಾವುದೇ ಧಕ್ಕೆಯಾಗದಂತೆ ನೋಡಿಕೊಳ್ಳುವ ಮತ್ತು ಎಸ್‌ಐಆರ್‌ನ ಸಂಪೂರ್ಣ ಪ್ರಕ್ರಿಯೆ ಸುಗಮವಾಗಿ ಪೂರ್ಣಗೊಳ್ಳುವುದನ್ನು ಖಚಿತಪಡಿಸಿಕೊಳ್ಳುವುದು ಪಶ್ಚಿಮ ಬಂಗಾಳ ಡಿಜಿಪಿ ಅವರ ಜವಾಬ್ದಾರಿ ಎಂದು ಪೀಠವು ಹೇಳಿತು.
ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಎಸ್‌ಐಆರ್‌ನಲ್ಲಿ ‘ಹೊಂದಾಣಿಕೆ’ ಆಗದ ಮತದಾರರ ಪಟ್ಟಿ ಸೇರಿದಂತೆ ಒಟ್ಟಾರೆ ಪ್ರಕ್ರಿಯೆಯಲ್ಲಿ ಲೋಪಗಳು ಇವೆ ಎಂದು ಆರೋಪಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿದೆ.
ಅವಧಿ ವಿಸ್ತರಣೆಗೆ ಮನವಿ (ಕೋಲ್ಕತ್ತ ವರದಿ): ಕರಡು ಪಟ್ಟಿಯಲ್ಲಿ ಸ್ಥಾನ ಪಡೆಯದ ಮತದಾರರಿಗೆ ಫಾರ್ಮ್ 7 ಮತ್ತು ಅಗತ್ಯ ದಾಖಲೆಗಳೊಂದಿಗೆ ತಮ್ಮ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸುವ ಅವಧಿಯನ್ನು ಕನಿಷ್ಠ ಒಂದು ವಾರ ವಿಸ್ತರಿಸಬೇಕು ಎಂದು ಬಿಜೆಪಿ, ಚುನಾವಣಾ ಆಯೋಗಕ್ಕೆ ಒತ್ತಾಯಿಸಿದೆ. ನಿಗದಿತ ವೇಳಾಪಟ್ಟಿಯಂತೆ ಫಾರ್ಮ್ 7 ಸಲ್ಲಿಕೆ ಅವಧಿ ಜನವರಿಗೆ 19ಕ್ಕೆ ಕೊನೆಗೊಂಡಿದೆ.
ಎಸ್‌ಐಆರ್ ಪ್ರಕ್ರಿಯೆಯಿಂದ ತೊಂದರೆ ಅನುಭವಿಸುವ ಸಾಧ್ಯತೆ ಇರುವ ಎಲ್ಲರಿಗೂ ತಮ್ಮ ದಾಖಲೆಗಳು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ನೀಡಬೇಕು
-ಸುಪ್ರೀಂ ಕೋರ್ಟ್ ಪೀಠ
‘ಅಕ್ಷರ ದೋಷ ಇದ್ದರೂ ನೋಟಿಸ್’
ಅರ್ಜಿದಾರರ ಪರ ಹಾಜರಿದ್ದ ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಮತದಾರರ ಹೆಸರಿನಲ್ಲಿ ಅಕ್ಷರ ದೋಷ ಕಂಡುಬಂದರೂ ಅವರಿಗೆ ನೋಟಿಸ್ ಕಳುಹಿಸುವ ಚುನಾವಣಾ ಆಯೋಗದ ಕ್ರಮವನ್ನು ಪ್ರಶ್ನಿಸಿದರು. ‘ಗಂಗೂಲಿ’ ‘ದತ್ತಾ’ ಮುಂತಾದ ಹೆಸರುಗಳನ್ನು ಭಿನ್ನ ರೀತಿಯಲ್ಲಿ ಉಚ್ಚರಿಸಬಹುದು. ಹೆಸರು ಬರೆಯುವಾಗ ಅಕ್ಷರ ದೋಷ ಇರುವುದನ್ನು ಕೂಡಾ ನೋಟಿಸ್‌ಗೆ ಕಾರಣವಾಗಿ ಉಲ್ಲೇಖಿಸಲಾಗಿದೆ ಎಂದರು. ಕೆಲವು ಪ್ರಕರಣಗಳಲ್ಲಿ ಮತದಾರರ ಹಾಗೂ ಅವರ ಪೋಷಕರ ನಡುವಿನ ವಯಸ್ಸಿನ ಅಂತರವು 15 ವರ್ಷಕ್ಕಿಂತ ಕಡಿಮೆ ಇದೆ ಎಂಬ ಕಾರಣಕ್ಕೆ ನೋಟಿಸ್ ಕಳುಹಿಸಲಾಗಿದೆ ಎಂದು ಹೇಳಿದರು. ‘ಹೆಸರಿನಲ್ಲಿರುವ ಅಕ್ಷರ ದೋಷಗಳನ್ನು ಉಲ್ಲೇಖಿಸಿ ನೋಟಿಸ್ ಕಳುಹಿಸದಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ’ ಎಂದು ಚುನಾವಣಾ ಆಯೋಗದ ಪರ ಹಾಜರಾದ ಹಿರಿಯ ವಕೀಲ ರಾಕೇಶ್ ದ್ವಿವೇದಿ ಪೀಠಕ್ಕೆ ತಿಳಿಸಿದರು.