ADVERTISEMENT

SIR | ಹಿಂದೂ ನಿರಾಶ್ರಿತರ ಮೇಲೆ ಪರಿಣಾಮ: ಸಿಪಿಎಂ ನಾಯಕ ಕಾಂತಿ ಗಂಗೂಲಿ

ಪಿಟಿಐ
Published 1 ಜನವರಿ 2026, 14:12 IST
Last Updated 1 ಜನವರಿ 2026, 14:12 IST
   

ಕೋಲ್ಕತ್ತ: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯು ಬಾಂಗ್ಲಾದೇಶದಿಂದ ಪಲಾಯನ ಮಾಡಿ ಪಶ್ಚಿಮ ಬಂಗಾಳದಲ್ಲಿ ನೆಲಸಿರುವ ಹಿಂದೂಗಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಎಂದು ಸಿಪಿಎಂನ ಹಿರಿಯ ನಾಯಕ ಕಾಂತಿ ಗಂಗೂಲಿ ಹೇಳಿದ್ದಾರೆ.

ದಾಖಲೆಗಳ ಪರಿಶೀಲನೆಗಾಗಿ ಶುಕ್ರವಾರ ಅಧಿಕಾರಿಗಳ ಮುಂದೆ ಹಾಜರಾಗಲಿರುವ 82 ವರ್ಷ ವಯಸ್ಸಿನ ಅವರು, ಚುನಾವಣಾ ಆಯೋಗ ಕೈಗೊಂಡಿರುವ ಎಸ್‌ಐಆರ್‌ ಪ್ರಕ್ರಿಯೆಯನ್ನು ಸಮರ್ಥಿಸಿಕೊಂಡರು.

‘ನಾನು ಎಸ್‌ಐಆರ್‌ ಪರವಾಗಿದ್ದೇನೆ. ಆದರೆ ಇದು ಬಲು ದೊಡ್ಡ ಮತ್ತು ಹೆಚ್ಚು ಸವಾಲಿನ ಕೆಲಸ. ಈ ಪ್ರಕ್ರಿಯೆಯನ್ನು ಇನ್ನಷ್ಟು ಪಾರದರ್ಶಕ ಹಾಗೂ ನಿಖರವಾಗಿ ಮಾಡಲು, ಹೆಚ್ಚಿನ ಸಮಯ ನಿಗದಿಪಡಿಸಬೇಕಾಗಿತ್ತು. ಭಾರತವು ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ದೇಶವಾಗಿರುವ ಕಾರಣ, ಮತದಾರರ ಪಟ್ಟಿಗಳ ಸಮಗ್ರ ಪರಿಷ್ಕರಣೆಗೆ ಹೆಚ್ಚಿನ ಸಮಯ ನೀಡಬೇಕಾಗಿತ್ತು’ ಎಂದು ತಿಳಿಸಿದರು.

ADVERTISEMENT

‘ನಾನು ಸುಂದರಬನ ಪ್ರದೇಶದವನು. ಬಾಂಗ್ಲಾದೇಶದಿಂದ ಬಂದು ನೆಲಸಿರುವ ಹಿಂದೂಗಳು ಅಲ್ಲಿ ದೊಡ್ಡ ಸಂಖ್ಯೆಯಲ್ಲಿದ್ದಾರೆ. ಈ ಪ್ರಕ್ರಿಯೆ ಅವರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ’ ಎಂದರು.

‘ಚುನಾವಣಾ ಆಯೋಗವು ಸೂಕ್ತ ಸಿದ್ಧತೆ ಮಾಡಿಕೊಂಡು ಎಸ್‌ಐಆರ್‌ಗಾಗಿ ವಿಸ್ತೃತ ಮಾರ್ಗಸೂಚಿ ರೂಪಿಸಬೇಕಿತ್ತು. ಹಾಗಾದಲ್ಲಿ, ಈ ಪ್ರಕ್ರಿಯೆ ಬಗ್ಗೆ ಮತದಾರರಲ್ಲಿ ತಪ್ಪು ಅಭಿಪ್ರಾಯ ಮೂಡುವುದನ್ನು ತಡೆಯಬಹುದಿತ್ತು’ ಎಂದು ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.