ADVERTISEMENT

ಪರಿಸ್ಥಿತಿ ಅವಲೋಕಿಸಿದ ನಿರ್ಮಲಾ, ರಿಜಿಜು

ಅರುಣಾಚಲದಲ್ಲಿ ಪೊಲೀಸರು– ಯೋಧರ ನಡುವೆ ನಡೆದ ಘರ್ಷಣೆ

ಪಿಟಿಐ
Published 7 ನವೆಂಬರ್ 2018, 20:04 IST
Last Updated 7 ನವೆಂಬರ್ 2018, 20:04 IST

ಬಾಮ್ಡಿಲಾ: ಅರುಣಾಚಲ ಪೊಲೀಸ್‌ ಸಿಬ್ಬಂದಿ ಹಾಗೂ ಯೋಧರ ನಡುವೆ ನಡೆದ ಘರ್ಷಣೆ ಕುರಿತು ಮಾಹಿತಿ ಸಂಗ್ರಹಿಸಿದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಹಾಗೂ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಕಿರಣ್‌ ರಿಜಿಜು, ಪರಿಸ್ಥಿತಿಯ ಅವಲೋಕನ ನಡೆಸಿದರು.

ಕಳೆದ ವಾರ ಯೋಧರು ಬಾಮ್ಡಿಲಾ ಪೊಲೀಸ್‌ ಠಾಣೆ ಧ್ವಂಸಗೊಳಿಸಿ, ಪೊಲೀಸರು ಹಾಗೂ ಕೆಲವು ನಾಗರಿಕರ ಮೇಲೆ ಹಲ್ಲೆ ನಡೆಸಿದ್ದರು.

‘ಸೇನೆ ಮತ್ತು ರಾಜ್ಯ ಪೊಲೀಸ್‌ ಸಿಬ್ಬಂದಿ ನಡುವೆ ನಡೆದ ಸಂಘರ್ಷದ ಬಗ್ಗೆ ನಾನು ಮತ್ತು ರಕ್ಷಣಾ ಸಚಿವರು ಸಂಪೂರ್ಣ ಮಾಹಿತಿ ಪಡೆದಿದ್ದೇವೆ. ಸೇನೆಯ ವಿರುದ್ಧ ಪೊಲೀಸ್‌ ಹಾಗೂ ಸಾರ್ವಜನಿಕ ಆಡಳಿತದ ಸಮಸ್ಯೆ ಎಂದು ಪರಿಗಣಿಸಬಾರದು. ಇದೊಂದು ದುರದೃಷ್ಟಕರ ಘಟನೆ. ಪರಸ್ಪರ ತಿಳಿವಳಿಕೆಯಿಂದ ಈ ಸಮಸ್ಯೆ ಬಗೆಹರಿಸಲಾಗುವುದು’ ಎಂದು ಸಚಿವ ರಿಜಿಜು ತಿಳಿಸಿದ್ದಾರೆ. ಜನರಲ್ಲಿ ಆತ್ಮವಿಶ್ವಾಸ ಬೆಳೆಸಲು ಸಚಿವೆ ನಿರ್ಮಲಾ ಸೀತಾರಾಮನ್‌ ಹಾಗೂ ರಿಜಿಜು ಅವರು ಸಮಾಜದ ಕೆಲವು ಪ್ರಮುಖರನ್ನು ಭೇಟಿ ಮಾಡಿದರು.

ADVERTISEMENT

ಬಾಮ್ಡಿಲಾದಲ್ಲಿ ನಡೆದ ಬುದ್ಧ ಮಹೋತ್ಸವ ಉತ್ಸವದಲ್ಲಿ ನಾಗರಿಕರು ಮತ್ತು ಪೊಲೀಸ್ ಸಿಬ್ಬಂದಿಯೊಂದಿಗೆ ಯೋಧರ ಗುಂಪು ಅಸಭ್ಯವಾಗಿ ವರ್ತಿಸಿದಾಗ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಂತರ ಸ್ಥಳೀಯ ಠಾಣೆಯ ಅಧಿಕಾರಿ ಸ್ಥಳಕ್ಕೆ ತೆರಳಿ ಇಬ್ಬರು ಯೋಧರನ್ನು ಪೊಲೀಸ್‌ ಠಾಣೆಗೆ ಕರೆತಂದಿದ್ದರು. ಇದಕ್ಕೆ ಕೆರಳಿದ ಯೋಧರು, ಬಾಮ್ಡಿಲಾ ಠಾಣೆ ಧ್ವಂಸಗೊಳಿಸಿ, ಪೊಲೀಸರು ಹಾಗೂ ಕೆಲವು ನಾಗರಿಕರ ಮೇಲೆ ಹಲ್ಲೆ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.