ADVERTISEMENT

ತಮಿಳುನಾಡು ವಿಧಾನಸಭೆ ಚುನಾವಣೆ| ಕಮಲ್‌ ನೇತೃತ್ವದಲ್ಲಿ ತೃತೀಯ ರಂಗ?

ಪಿಟಿಐ
Published 22 ಫೆಬ್ರುವರಿ 2021, 2:11 IST
Last Updated 22 ಫೆಬ್ರುವರಿ 2021, 2:11 IST
ಕಾರ್ಯಕ್ರಮವೊಂದರಲ್ಲಿ ಸಂಭಾಷಣೆಯಲ್ಲಿ ತೊಡಗಿರುವ ಕಮಲ್‌ ಹಾಸನ್‌ ಮತ್ತು ರಜನಿಕಾಂತ್‌ (ಸಂಗ್ರಹ ಚಿತ್ರ-ಪಿಟಿಐ)
ಕಾರ್ಯಕ್ರಮವೊಂದರಲ್ಲಿ ಸಂಭಾಷಣೆಯಲ್ಲಿ ತೊಡಗಿರುವ ಕಮಲ್‌ ಹಾಸನ್‌ ಮತ್ತು ರಜನಿಕಾಂತ್‌ (ಸಂಗ್ರಹ ಚಿತ್ರ-ಪಿಟಿಐ)   

ಚೆನ್ನೈ: ತಮಿಳುನಾಡಿನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ತಮ್ಮ ನಾಯಕತ್ವದಲ್ಲಿ 'ತೃತೀಯ ರಂಗ'ದ ರಚನೆಯಾಗುವ ಸಾಧ್ಯತೆ ಇದೆ ಎಂದು ನಟ-ರಾಜಕಾರಣಿ ಕಮಲ್ ಹಾಸನ್ ಭಾನುವಾರ ಹೇಳಿದ್ದಾರೆ.

ಚೆನ್ನೈನ ಖಾಸಗಿ ಕಾಲೇಜಿನಲ್ಲಿ ನಡೆದ ಪಕ್ಷದ (ಮಕ್ಕಳ್‌ ನೀಧಿ ಮಯಂ) ನಾಲ್ಕನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಕಮಲ್‌ ಹಾಸನ್‌, ಡಿಎಂಕೆ ವರಿಷ್ಠರಿಂದ ಮೈತ್ರಿಯ ಆಹ್ವಾನ ಬಂದರೆ ಅದನ್ನೂ ತಾವು ಪರಿಗಣಿಸುವುದಾಗಿ ತಿಳಿಸಿದ್ದಾರೆ.

'ತೃತೀಯ ರಂಗ ರೂಪುಗೊಳ್ಳಲಿದೆ ಎಂದು ಭಾವಿಸುತ್ತೇನೆ. ಪರಿಸ್ಥಿತಿ ಅನುಕೂಲಕರವಾಗುತ್ತಿದೆ. ಶೀಘ್ರದಲ್ಲೇ ಅದು ನಡೆಯಬಹುದು' ಎಂದು ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.

ADVERTISEMENT

ತಮಿಳುನಾಡಿನಲ್ಲಿ ಆಡಳಿತಾರೂಢ ಎಐಎಡಿಎಂಕೆ-ಬಿಜೆಪಿ ಹಾಗೂ ಡಿಎಂಕೆ- ಕಾಂಗ್ರೆಸ್ ನೇತೃತ್ವದ ಮೈತ್ರಿ ಈಗಾಗಲೇ ಅಸ್ತಿತ್ವದಲ್ಲಿದ್ದು, ಎರಡೂ ಮೈತ್ರಿಕೂಟದಿಂದ ಏಪ್ರಿಲ್-ಮೇನಲ್ಲಿ ಚುನಾವಣೆ ಪ್ರಚಾರ ಆರಂಭವಾಗಲಿದೆ.

ನಟ ರಜನಿಕಾಂತ್‌ ಅವರು ರಾಜಕೀಯಕ್ಕೆ ಬರುವರೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಅವರು, 'ಆರೋಗ್ಯ ಪರಿಸ್ಥಿತಿಗಳ ಹಿನ್ನೆಲೆಯಲ್ಲಿ ತಾವು ರಾಜಕೀಯಕ್ಕೆ ಬರುವುದಿಲ್ಲ ಎಂದು ರಜನಿಕಾಂತ್‌ ಅವರೇ ಹೇಳಿದ್ದಾರೆ. ಹೀಗಿದ್ದೂ, ಅವರನ್ನು ಹೇಗೆ ರಾಜಕೀಯಕ್ಕೆ ಆಹ್ವಾನಿಸಲಿ,' ಎಂದು ಕಮಲ್‌ ಮಾಧ್ಯಮಗಳನ್ನು ಪ್ರಶ್ನೆ ಮಾಡಿದರು. ಇತ್ತೀಚೆಗೆ ಕಮಲ್‌ಹಾಸನ್‌ ಅವರು ರಜನಿಕಾಂತ್‌ ಅವರನ್ನು ಪೊಯಸ್‌ ಗಾರ್ಡನ್‌ನ ಅವರ ನಿವಾಸದಲ್ಲಿ ಭೇಟಿಯಾಗಿ ಚರ್ಚಿಸಿದ್ದರು.

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರ ಆಮ್‌ ಆದ್ಮಿ ಪಕ್ಷ ತೃತೀಯ ರಂಗ ಸೇರುವುದೇ ಎಂಬ ಪ್ರಶ್ನೆಗೆ, 'ಮಕ್ಕಳ್‌ ನೀದಿ ಮಯಂ'ನ ಮೊದಲ ವರ್ಷದ ಸಂಸ್ಥಾಪನಾ ದಿನದಲ್ಲಿ ಅವರು ಭಾಗವಹಿಸಿದ್ದರು. ಜನರ ಉದ್ಧಾರಕ್ಕಾಗಿ ಯಾರೆಲ್ಲ ಚಿಂತಿಸುತ್ತಾರೋ ಅವರಿಗೆ ಸದಾ ಸ್ವಾಗತವಿರಲಿದೆ,' ಎಂದು ಅವರು ಹೇಳಿದರು.

ತಮಿಳುನಾಡಿನಲ್ಲಿ ಬಹುತೇಕ ಮೇ ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.